ಶಿರಹಟ್ಟಿಯಲ್ಲಿ ಕೈಗಾರಿಕೆ ಮರೀಚಿಕೆ

INDUSTRIES
Published on

ಉದಯಕುಮಾರ ಹಣಗಿ ಶಿರಹಟ್ಟಿ
ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಿಸುವ ಯಾವುದೇ ಕೈಗಾರಿಕೆಗಳು ಇಲ್ಲ. ಪರಿಣಾಮವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಉದ್ಯೋಗಕ್ಕಾಗಿ ಗುಳೇ ಹೋಗುವ ಪದ್ಧತಿ ತಪ್ಪುತ್ತಿಲ್ಲ. ದಶಕಗಳೇ ಉರುಳಿದರೂ ಜನರ ಜೀವನಮಟ್ಟ ಸುಧಾರಿಸಿಲ್ಲ.

ಎಂಟನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ಸ್ವಾತಂತ್ರೃ ಪೂರ್ವದವರೆಗೆ ಕಲ್ಲಿನ ಪಾತ್ರೆ ತಯಾರಿಕೆ, ರೇಷ್ಮೆ ಸಾಕಣಿಕೆ ಮತ್ತು ಉತ್ಪನ್ನಗಳ ತಯಾರಿಕೆ ಹಾಗೂ ತಂಬಾಕು, ಬೀಡಿ ಕಟ್ಟುವುದಕ್ಕೆ ಹೆಸರು ಮಾಡಿದ ಪ್ರದೇಶದಲ್ಲಿ ಸ್ವಾತಂತ್ರ್ಯದ ನಂತರ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಮರೀಚಿಕೆಯಾಗಿವೆ. ಒಂದು ಕಾಲದಲ್ಲಿ ಗುಡಿ ಕೈಗಾರಿಕೆಗೆ ಹೆಸರಾಗಿದ್ದ ಊರು ಇದೀಗ ಅದರ ಅವಶೇಷವೂ ಇಲ್ಲದಂತಾಗಿದೆ.

ಭೂಮಿ, ನೀರು, ಸಾರಿಗೆ, ಪರಿಸರ ಇಲಾಖೆ ಸೇರಿದಂತೆ ಸರ್ಕಾರದ ಪ್ರೋತ್ಸಾಹ ಸಮರ್ಪಕವಾಗಿ ಸಿಗದ ಕಾರಣ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ತಾಲೂಕು ಪ್ರದೇಶದಲ್ಲಿ ಕಪ್ಪು ಮತ್ತು ಕೆಂಪು ಮಿಶ್ರಿತ ಮಣ್ಣು ಇರುವುದರಿಂದ ಬಂಗಾರ, ಅಲ್ಯುಮಿನಿಯಂ ಮತ್ತು ತವರು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಬೃಹತ್ ಕೈಗಾರಿಕೆ ತೆರೆದು ಗಣಿಗಾರಿಕೆಗೆ ನಡೆಸಲು ಕೆಲ ಉದ್ಯಮಿಗಳು ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಉದ್ಯಮದಾರರು ಮನಸು ಮಾಡುತ್ತಿಲ್ಲ. ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ರೇಷ್ಮೆ ಮಾರುಕಟ್ಟೆ ಎರಡನೇ ಸ್ಥಾನದಲ್ಲಿದ್ದಾಗ ನೂಲು ತಯಾರಿಕೆ ಸಣ್ಣ ಕೈಗಾರಿಕೆ ಪ್ರಾರಂಭವಾಯಿತು. ಇತ್ತೀಚೆಗೆ ಈ ಕೈಗಾರಿಕೆಯೂ ಬಂದ್ ಅಗುವ ಪರಿಸ್ಥಿತಿ ಬಂದಿದೆ.

ತಾಲೂಕಿನ ಕೇಂದ್ರದ ಸುತ್ತಲೂ ರಿಯಲ್ ಎಸ್ಟೇಟ್ ಉದ್ಯಮದಾರರು ಜಮೀನು ಖರೀದಿಸಿ ಲೇಔಟ್‌ಗಳನ್ನು ನಿರ್ಮಿಸಿ ಹೆಚ್ಚಿನ ಬೆಲೆಗೆ ಪ್ಲಾಟ್‌ಗಳನ್ನು ಮಾರಾಟ ಮಾಡುತ್ತಿರುವುದರಿಂದ ಜಮೀನು ಈಗ ಬಲು ದುಬಾರಿಯಾಗಿದೆ. ಕೈಗಾರಿಕೆ ಸ್ಥಾಪನೆ ಮಾಡುವವರು ಹೆಚ್ಚು ಹಣ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನಸು ಮಾಡುತ್ತಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.

ಕೃಷಿ ಆಧಾರಿತ ತಾಲೂಕು ಎಂದು ಕರೆಸಿಕೊಳ್ಳುವ ಶಿರಹಟ್ಟಿಯಲ್ಲಿ ಒಂದು ಎಪಿಎಂಸಿ ಕೂಡ ಇಲ್ಲ. ರೈತರು ತಮ್ಮ ಉತ್ಪನ್ನಗಳು ತೆಗೆದುಕೊಂಡು ಪಕ್ಕದ ಲಕ್ಷ್ಮೇಶ್ವರ ಮಾರುಕಟ್ಟೆಗೆ ಹೋಗಬೇಕಾಗುವ ಸ್ಥಿತಿ ಇದೆ. ಎಪಿಎಂಸಿಯೂ ಇಲ್ಲದ ಕಾರಣ ಹತ್ತಿಯಿಂದ ನೂಲು ತೆಗೆಯುವ ಕಾರ್ಖಾನೆ, ಎಣ್ಣೆ ಪದಾರ್ಥದ ಶೇಂಗಾ ಕಾರ್ಖಾನೆ ಮತ್ತು ದ್ವಿದಳದ ಧಾನ್ಯಗಳನ್ನು ಬೇರ್ಪಡಿಸುವ ಕಾರ್ಖಾನೆಗಳು ಕೂಡ ದೊಡ್ಡ ಮಟ್ಟದಲ್ಲಿ ಇಲ್ಲದಿರುವುದರಿಂದ ಆರ್ಥಿಕವಾಗಿ ಪಟ್ಟಣ ಹಿಂದುಳಿದಿದೆ.

ರೇಷ್ಮೆ ಗೂಡಿನ ಗುಣಮಟ್ಟ ಕಡಿಮೆ ಯಾಗುತ್ತಿದೆ. ಅಧುನಿಕ ನೂಲು ತೆಗೆಯುವ ಯಂತ್ರ ಗಳಿಂದ ರೇಷ್ಮೆ ನೂಲು ತೆಗೆದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಸರ್ಕಾರ ಗಮನ ಹರಿಸಿದರೆ ಶಿರಹಟ್ಟಿಯಲ್ಲಿ ಬೃಹತ್ ಪ್ರಮಾಣದ ರೇಷ್ಮೆ ಕೈಗಾರಿಕಾ ಕ್ರಾಂತಿ ಯಾಗುತ್ತದೆ.ಚಂದ್ರಕಾಂತ ಅಕ್ಕಿ ರೇಷ್ಮೆ ಉದ್ಯಮಿ

ಜಮೀನಿನ ಬೆಲೆ ದುಬಾರಿಯಾಗಿ ದ್ದರಿಂದ ಶಿರಹಟ್ಟಿ ತಾಲೂಕಿನಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಲು ಉದ್ಯಮದಾರರು ಮುಂದೆ ಬರುತ್ತಿಲ್ಲ. ಅಲ್ಲದೆ, ಕುಶಲ ಕಾರ್ಮಿಕರ ಕೊರತೆ ಇರುವುದು ಕೈಗಾರಿಕೆಯಿಂದ ವಂಚಿತವಾಗಲು ಕಾರಣವಾಗುತ್ತಿದೆ.ಶೌಕತ್ ಅಲಿ ಬಾಷಾಸಾಬ್ ಕಾಗದಗಾರ, ಸಣ್ಣ ಉದ್ಯಮಿ ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net