

ಮಂಡ್ಯ: ನಿರೀಕ್ಷೆ ಹುಸಿಯಾದರೂ ನೂತನ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಭಾರಿ ಕೈಗಾರಿಕೆ ಖಾತೆ ಒಲಿದು ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನಿರೀಕ್ಷೆಗಳು ಗರಿಗೆದರಿವೆ. ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಕೈಗಾರಿಕೆ ಕ್ಷೇತ್ರದಿಂದ ದೂರವೇ ಉಳಿದಿರುವ ಮಂಡ್ಯ ಇನ್ನಾದರೂ ಅಭಿವೃದ್ಧಿ ಕಡೆಗೆ ಮುಖ ಮಾಡಬೇಕಿದ್ದು, ಇದರಲ್ಲಿ ಎಚ್‌ಡಿಕೆ ಅವರ ಹೊಣೆಗಾರಿಕೆ ಹೆಚ್ಚಾಗಿದೆ.
ಅಮೃತ ಮಹೋತ್ಸವ ಆಚರಿಸಿಕೊಂಡಿರುವ ಹಾಗೂ ಸಕ್ಕರೆನಾಡು ಎನ್ನುವ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆ ಹೊರಗಿನವರಿಗೆ ಅಂದುಕೊಳ್ಳುವಂತೆ ಅಭಿವೃದ್ಧಿಯಾಗಿಲ್ಲ ಎನ್ನುವುದು ಬಹಿರಂಗ ಸತ್ಯ. ಅವಶ್ಯಕತೆಗಿಂತಲೂ ಹೆಚ್ಚಿರುವ ರಾಜಕಾರಣದ ಮೇಲಾಟದಿಂದಾಗಿ ಅಭಿವೃದ್ಧಿ ಎನ್ನುವ ಮರೀಚಿಕೆಯಾಗಿದೆ. ರಾಜಕೀಯ ವಿಚಾರಕ್ಕೆ ರಾಷ್ಟ್ರಮಟ್ಟದವರೆಗೂ ಖ್ಯಾತಿ ಪಡೆದಿರುವ ಜಿಲ್ಲೆಗೆ ಅದೇ ರಾಜಕೀಯವೇ ತೊಡಕಾಗಿ ಪರಿಗಣಿಸಿದೆ. ಪರಿಣಾಮ ಬೆಂಗಳೂರು-ಮೈಸೂರು ನಡುವೆ ಇರುವ ದೊಡ್ಡಹಳ್ಳಿ ಎನ್ನುವ ಅನಾವಶ್ಯಕವಾದ ಅಪಖ್ಯಾತಿ ಪಡೆದುಕೊಂಡಿದೆ. ಆದ್ದರಿಂದ ರಾಜಕೀಯವನ್ನು ಬದಿಗೆ ಸರಿಸಿ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತಾಬೇಕಿದೆ.
ಸೌಲಭ್ಯವಿದ್ದರೂ ವ್ಯರ್ಥ: ಜಿಲ್ಲೆಯಲ್ಲಿ ಮೂಲಸೌಲಭ್ಯಕ್ಕೆ ಬರವಿಲ್ಲ. ಆದರೂ ಕೈಗಾರಿಕೆಗಳ ಪ್ರಮಾಣ ತೀರಾ ಕಡಿಮೆ. ಅಕ್ಕಪಕ್ಕದ ಜಿಲ್ಲೆಗೆ ಹೋಲಿಸಿದರೆ ಕೆಳಮಟ್ಟದಲ್ಲಿದೆ. ಇನ್ನು ನಾಲ್ಕು ಕಡೆ ಕೈಗಾರಿಕೆ ಬಡಾವಣೆಯನ್ನು ಕಾಣಬಹುದು. 1975ರಲ್ಲಿ ಪ್ರಾರಂಭವಾದ ಮದ್ದೂರು ತಾಲೂಕು ಸೋಮನಹಳ್ಳಿ ಕೈಗಾರಿಕಾ ಬಡಾವಣೆ ಸುಮಾರು 154 ಎಕರೆ ಪ್ರದೇಶ ಹೊಂದಿದೆ. 2008ರಲ್ಲಿ ಗೆಜ್ಜಲಗೆರೆಯಲ್ಲಿ 8 ಎಕರೆ ಪ್ರದೇಶದಲ್ಲಿ ಸ್ಥಾಪಿತವಾದ ಕೈಗಾರಿಕೆ ಬಡಾವಣೆ, ಇನ್ನು ಮಂಡ್ಯ ತಾಲೂಕು ತೂಬಿನಕೆರೆಯಲ್ಲಿ 1985ರಲ್ಲಿ ಪ್ರಾರಂಭವಾದ ಕೈಗಾರಿಕೆ ಬಡಾವಣೆ ಸುಮಾರು 161 ಎಕರೆ ಇದೆ. ಅಂತೆಯೇ ಮೈಸೂರಿಗೆ ಹೊಂದಿಕೊಂಡಂತಿರುವ ಹೆಬ್ಬಾಳ-2ರಲ್ಲಿ 2005ರಲ್ಲಿ ಸುಮಾರು 193 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಪ್ರಾರಂಭವಾಯಿತು.
ಇನ್ನು ಪ್ರಸ್ತುತ ಇರುವ ಕೈಗಾರಿಕೆಗಳ ವಿಚಾರಕ್ಕೆ ಬರುವುದಾದರೆ 12 ದೊಡ್ಡ ಕೈಗಾರಿಕೆಗಳಿವೆ. ಇದರಲ್ಲಿ ಐದು ಸಕ್ಕರೆ ಕಾರ್ಖಾನೆಗಳು. ಉಳಿದಂತೆ 30ಕ್ಕೂ ಹೆಚ್ಚು ಮಧ್ಯಮ ವಲಯದ ಕೈಗಾರಿಕೆಗಳಿವೆ. ಇದರಲ್ಲಿ ಆಗ್ರೋ, ಆಯಿಲ್, ಆಹಾರ ಉತ್ಪಾದನೆ ನಡೆಯುತ್ತವೆ. ಕೈಗಾರಿಕೆ ಕ್ಷೇತ್ರವನ್ನು ಗಮನಿಸಿದರೆ ಜಿಲ್ಲೆಯಲ್ಲಿ ಜಡ್ಡು ಹಿಡಿದಿದೆ. ಹೊಸ ಕೈಗಾರಿಕೋದ್ಯಮಿಗಳು ಬರುತ್ತಿಲ್ಲ. ಇದ್ದವರು ಕೆಲ ಕಾರಣದಿಂದ ಬಿಟ್ಟು ಹೋಗುತ್ತಿದ್ದಾರೆ. ಈವರೆಗೆ ಶೇ.10ರಷ್ಟು ಕೈಗಾರಿಕೆ ಬಾಗಿಲು ಮುಚ್ಚಿವೆ.
ಹಿಂದೆ ಒಂದೆರೆಡು ಕಡೆ ಕೈಗಾರಿಕೆ ಹಬ್‌ಗೆಂದು ಜಾಗ ಗುರುತಿಸಿದರೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯೋಜನೆಯನ್ನು ಕೈಬಿಡಲಾಗಿದೆ. ಈ ನಡುವೆ ಮಂಡ್ಯ ತಾಲೂಕು ನೊದೆಕೊಪ್ಪಲು ಭಾಗದಲ್ಲಿ 284 ಎಕರೆ ಹಾಗೂ ಮಳವಳ್ಳಿ ತಾಲೂಕಿನಲ್ಲಿ ಜಾಗ ಗುರುತಿಸಲಾಗಿದೆ. ಆದರೆ ಯಾವುದೇ ಅಂತಿಮ ಪ್ರಕ್ರಿಯೆ ನಡೆದಿಲ್ಲ. ಸರ್ಕಾರಿ ಜಾಗದ ಪ್ರಮಾಣ ಹೆಚ್ಚಿಗೆ ಸಿಗುವುದಿಲ್ಲ. ಕಾರಣ ಒತ್ತುವರಿ ಸೇರಿದಂತೆ ಹಲವು ಸಮಸ್ಯೆ ಎದುರಾಗಿದೆ. ಈ ಎಲ್ಲ ಅಡೆತಡೆಗಳನ್ನು ದಾಟಿ ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ಪ್ರಾರಂಭವಾಗಬೇಕಿದೆ.
ಕೈಗಾರಿಕೆ ಬರಲಿ, ಉದ್ಯೋಗ ಸಿಗಲಿ
ಪ್ರಮುಖವಾಗಿ ನೋಡಿದರೆ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಶಾಶ್ವತ ಕಾಯಕಲ್ಪ ಸಿಗಲೇಬೇಕಿದೆ. ಹಲವು ವರ್ಷದಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಕೆಲ ವರ್ಷದ ಹಿಂದೆ ಮರುಜೀವ ನೀಡಲಾಗಿದೆ. ಕಳೆದ ವರ್ಷ ಕಾರ್ಖಾನೆಯೂ ಯಶಸ್ವಿಯಾಗಿ ಕಬ್ಬು ಅರೆಯುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದೇ ರೀತಿ ಕಾರ್ಖಾನೆ ಚಾಲನೆಯಲ್ಲಿದ್ದರೆ ಲಕ್ಷಾಂತರ ಜನರ ಬದುಕಿಗೆ ದಾರಿಯಾಗಲಿದೆ. ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ಆದಾಯ ಬರಲಿದೆ. ಇನ್ನು ಹೊಸ ಕಾರ್ಖಾನೆ ಮಾಡುವುದಾಗಿ ರಾಜ್ಯಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕಿನಲ್ಲಿಯೂ ಕೈಗಾರಿಕೆಗಳೇ ಇಲ್ಲ. ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ಗಾಮೆಂಟ್ಸ್ ಬಿಟ್ಟರೆ ಕಾರ್ಖಾನೆಗಳ ಸಂಖ್ಯೆ ತೀರಾ ಕಡಿಮೆ. ಪರಿಣಾಮ ಜನರು ಬದುಕು ನಡೆಸಲು ಮೈಸೂರು, ಬೆಂಗಳೂರಿನ ಕಡೆಗೆ ವಲಸೆ ಹೋಗುತ್ತಿದ್ದಾರೆ. ಶೇ.100ರಷ್ಟು ಜನರು ದುಡಿಯಲು ಶಕ್ತರಾಗಿದ್ದರೂ ಜಿಲ್ಲೆಯಲ್ಲಿ ಶೇ.20ರಷ್ಟು ಜನರಿಗೆ ಮಾತ್ರ ಉದ್ಯೋಗವಿದೆ. ಶೇ.80ರಷ್ಟು ಜನ ನೆರೆ ಜಿಲ್ಲೆಗಳನ್ನು ಆಶ್ರಯಿಸಿದ್ದಾರೆ. ಈ ನಡುವೆ ಪ್ರಸ್ತುತ ಮಧ್ಯಮ ವರ್ಗ ಹಾಗೂ ಕೃಷಿ ಭೂಮಿಯಿಲ್ಲದ ಕುಟುಂಬಕ್ಕೆ ಗಾಮೆಂಟ್ಸ್ ಆಧಾರವಾಗಿವೆ.
ಕಾಡಿತು ಭೀಕರ ಬರಗಾಲ
ಜಿಲ್ಲೆಗೆ ಕೈಗಾರಿಕೆ ಅವಶ್ಯಕತೆ ಎಷ್ಟಿದೆ ಎನ್ನುವುದು ಕಳೆದ ವರ್ಷ ಜನರಿಗೆ ಮನವರಿಕೆಯಾಗಿದೆ. ಹಿಂದೆಂದೂ ಕಂಡಂರಿಯದಂತಹ ಭೀಕರ ಬರಗಾಲ ಜನರನ್ನು ಬಾಧಿಸುವಂತೆ ಮಾಡಿತು. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಬೇಸಾಯ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಳ್ಳುವಂತೆ ಮಾಡಿತು. ಹತ್ತಾರೂ ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ತೆಂಗು, ಅಡಿಕೆ ಮರಗಳು ನೆಲಕಚ್ಚಿ ಬದುಕಿಗೆ ದೊಡ್ಡ ಹೊಡೆತ ನೀಡಿದೆ. ಪರಿಣಾಮ ಕೃಷಿ ಚಟುವಟಿಕೆಯಿಂದ ದೂರ ಸರಿದು ಸಣ್ಣಪುಟ್ಟ ಉದ್ಯಮ ಹಾಗೂ ಪಟ್ಟಣದತ್ತ ಮುಖ ಮಾಡುವಂತೆ ಮಾಡಿದೆ. ಇತ್ತ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಯುವಸಮೂಹ ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ಇಂದಿಗೂ ಉದ್ಯೋಗಮೇಳ ಆಯೋಜಿಸಿದರೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆಂದರೆ ಕೈಗಾರಿಕೆಯ ಅವಶ್ಯಕತೆಯನ್ನು ತೋರಿಸುತ್ತದೆ.
ಅಧಿಕಾರಿಗಳೊಂದಿಗೆ ಸಚಿವರ ಸಭೆ
ಸೋಮವಾರ ಖಾತೆ ವಹಿಸಿಕೊಂಡು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ದೆಹಲಿಯ ಕರ್ನಾಟಕ ಭವನದಲ್ಲಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಮಾಡಿ ಹಲವು ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮೊದಲ ಸಭೆಯಲ್ಲಿಯೇ ಕೂಲಂಕಷವಾಗಿ ಮಾಹಿತಿ ಪಡೆದುಕೊಂಡ ಸಚಿವರು, ಇಲಾಖೆಗಳ ಕುರಿತು ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ತಾವು ಕರ್ನಾಟಕದ ಸಿಎಂ ಆಗಿದ್ದಾಗ ಕೈಗಾರಿಕೆ ಇಲಾಖೆಯಲ್ಲಿ ತಂದ ಸುಧಾರಣೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸುಗಳನ್ನು ಈಡೇರಿಸುವ ಬದ್ಧತೆ ತಿಳಿಸಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ದೇಶದ ಉದ್ದಗಲಕ್ಕೂ ಉತ್ಪಾದನೆ ಹೆಚ್ಚಿಸಿ ಹೆಚ್ಚೆಚ್ಚು ಉದ್ಯೋಗ ಕಲ್ಪಿಸುವುದು ತಮ್ಮ ಗುರಿ. ಈ ನಿಟ್ಟಿನಲ್ಲಿ ಹದಿನೈದು ದಿನಗಳ ಒಳಗಾಗಿ ನೀಲನಕ್ಷೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಕೋಲಾರ ಸಂಸದ ಮಲ್ಲೇಶ್‌ಬಾಬು, ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ, ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ, ಬೃಹತ್ ಕೈಗಾರಿಕೆ ಸಚಿವಾಲಯ(ಸಾರ್ವಜನಿಕ ಉದ್ಯಮ) ಕಾರ್ಯದರ್ಶಿ ಸಂದೀಪ್‌ಕುಮಾರ್ ಇದ್ದರು.