

ಕೇಶವಮೂರ್ತಿ ವಿ.ಬಿ. ಹಾವೇರಿ
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ (ಕೆಐಎಡಿಬಿ)ದ ವತಿಯಿಂದ ತಾಲೂಕಿನ ಕೋಳೂರ- ಗಣಜೂರ ಮಧ್ಯದಲ್ಲಿ 407 ಎಕರೆಯಲ್ಲಿ ನಿರ್ವಿುಸುತ್ತಿರುವ ಇಂಡಸ್ಟ್ರಿಯಲ್ ಕಾರಿಡಾರ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಇಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಕೈಗಾರಿಕೋದ್ಯಮಿಗಳು ಬೇಸರಗೊಂಡಿದ್ದಾರೆ.
ಕೋಳೂರ- ಗಣಜೂರ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಭೂಸ್ವಾಧೀನ, ಪರಿಹಾರ ವಿತರಣೆ ಮತ್ತಿತರ ಕಾರಣಕ್ಕೆ ಈಗಾಗಲೇ ವಿಳಂಬವಾಗಿರುವ ಕಾಮಗಾರಿ ಕೊನೆಗೂ ಆರಂಭವಾಗಿದೆ. 200 ಎಕರೆ ಜಾಗದ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆಯಾದರೂ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
ಕಾರಿಡಾರ್ಗಾಗಿ ಕೆಐಎಡಿಬಿ ಕೋಳೂರ ಬಳಿಯ ಕರ್ಜಗಿ ರೈಲು ನಿಲ್ದಾಣದ ಬಳಿ ಒಟ್ಟು 407 ಎಕರೆ ಜಮೀನು ಗುರುತಿಸಿದೆ. ಇದರಲ್ಲಿ 39 ಎಕರೆ ಅರಣ್ಯ ಭೂಮಿ ಇದ್ದು, ಕೆಲ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕಿದೆ. ಹಾಗಾಗಿ, ಸದ್ಯಕ್ಕೆ ಮೊದಲ ಹಂತದಲ್ಲಿ 200 ಎಕರೆ ಜಾಗ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಬೆಂಗಳೂರಿನ ರಾಜಗೋಪಾಲ ಎಂಬುವವರ ಮಾಲೀಕತ್ವದ ಎಸ್ಆರ್ಸಿ ಇನ್ಫ್ರಾ ಕಂಪನಿ ಕಾರಿಡಾರ್ ನಿರ್ವಣದ ಗುತ್ತಿಗೆ ಪಡೆದಿದೆ. 407 ಎಕರೆ ಕಾರಿಡಾರ್ನ ಲೇಔಟ್ ನಿರ್ವಣಕ್ಕೆ 56 ಕೋಟಿ ರೂ. ನಿಗದಿಪಡಿಸಲಾಗಿದೆ. ಇಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಪೈಪ್ಲೈನ್, ಓವರ್ ಹೆಡ್ ಟ್ಯಾಂಕ್ ನಿರ್ವಣ, ವಿದ್ಯುತ್ ಸಂಪರ್ಕ, ಇತರ ಮೂಲಸೌಕರ್ಯ ಕಲ್ಪಿಸಬೇಕಿದೆ. ಸದ್ಯ 200 ಎಕರೆಯಲ್ಲಿ ಚರಂಡಿ ನಿರ್ವಣದ ಕೆಲಸ ಆರಂಭವಾಗಿದೆ.
2022ರಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಬಜೆಟ್ನಲ್ಲಿ ಹಣ ಕಾಯ್ದಿರಿಸಿದ್ದರು. ಯೋಜನೆಗೆ ಈವರೆಗೆ ಹಲವು ವಿಘ್ನಗಳು ಎದುರಾಗಿದ್ದವು. 2023ರಲ್ಲಿ ಶಾಸಕ ರುದ್ರಪ್ಪ ಲಮಾಣಿ ಭೂಮಿಪೂಜೆ ನರವೇರಿಸಿದ್ದರು. ಆರಂಭದಲ್ಲಿ ರೈತರ ಬೆಳೆ ಇದ್ದಿದ್ದಕ್ಕೆ ತಡ ಆಗಿತ್ತು. ನಂತರ ಪರಿಹಾರ ವಿಚಾರವಾಗಿ ವಿಳಂಬವಾಯಿತು. ಇದೀಗ ಮೊದಲ ಹಂತದ ಕಾಮಗಾರಿಗೆ ಚಾಲನೆ ದೊರೆತಿದ್ದು, ಆದಷ್ಟು ಶೀಘ್ರವೇ ಪೂರ್ಣಗೊಳಿಸಿ, ಕೈಗಾರಿಕೆಗಳಿಗೆ ಹಂಚಿಕೆ ಮಾಡಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಶಯವಾಗಿದೆ.
ಕಾರಿಡಾರ್ನಲ್ಲಿ ಎರಡು ಗುಂಟೆ, ಐದು, ಎಂಟು ಗುಂಟೆಯಿಂದ 10, 20 ಎಕರೆವರೆಗೆ ಒಂದೊಂದು ಪ್ಲಾಟ್ ನಿರ್ವಿುಸಲಾಗುತ್ತಿದೆ. ಸಣ್ಣ ಕೈಗಾರಿಕೆಗಳಿಂದ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೂ ಒಂದೇ ಕಡೆಗೆ ವೇದಿಕೆ ನಿರ್ವಿುಸಲಾಗುತ್ತಿದೆ.
ಕಾರಿಡಾರ್ನಲ್ಲಿ ಕೈಗಾರಿಕೆ ಸ್ಥಾಪಿಸಲು ಈಗಾಗಲೇ ಚೆನ್ನೈ ಮೂಲದ ಇವಿ ಬ್ಯಾಟರೀಸ್ ಕಂಪನಿ ಮುಂದೆ ಬಂದಿದೆ. ನೂರಾರು ಕಂಪನಿಗಳು ಆಸಕ್ತಿ ತೋರುತ್ತಿವೆ. ಕರ್ಜಗಿ ರೈಲು ನಿಲ್ದಾಣದಲ್ಲಿ ಹೊಸ ಗೋದಾಮು ನಿರ್ವಿುಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕಾರಿಡಾರ್ ಆರಂಭವಾದರೆ, ಅಕ್ಕಪಕ್ಕದ ಗ್ರಾಮಗಳ ಜಮೀನಿಗೆ ಭಾರಿ ಡಿಮಾಂಡ್ ಸೃಷ್ಟಿಯಾಗಲಿದೆ. ಜತೆಗೆ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ಹಾಗಾಗಿ, ತುರ್ತಾಗಿ ಕಾರಿಡಾರ್ ಕಾಮಗಾರಿ ಪೂರ್ಣಗೊಳಿಸಬೇಕಿದೆ.
407 ಎಕರೆಯಲ್ಲಿ ಮೊದಲ ಹಂತದಲ್ಲಿ 200 ಎಕರೆ ಜಾಗ ಅಭಿವೃದ್ಧಿಪಡಿಸಲಾಗುತ್ತಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಮೊದಲ ಹಂತ ಪೂರ್ಣಗೊಂಡು ಸೈಟು ಹಂಚಿಕೆ ಮಾಡಲಾಗುವುದು. ನಂತರ ಎರಡನೇ ಹಂತ ಆರಂಭಿಸಲಾಗುವುದು. | ಬಿ.ಟಿ.ಪಾಟೀಲ, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಐಎಡಿಬಿ