

ಮಂಡ್ಯ: ತಾಲೂಕಿನಲ್ಲಿ ಕೈಗಾರಿಕೆಗಳಿಲ್ಲದೆ ಯುವಜನರು ಹೊರ ಜಿಲ್ಲೆ, ರಾಜ್ಯದತ್ತ ವಲಸೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಮಾಡವೀರನಹಳ್ಳಿ ಸಮೀಪ ಕೈಗಾರಿಕಾ ಹಬ್ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಮಾಡವೀರನಹಳ್ಳಿ ಹಾಗೂ ಬಾಳೇನಹಳ್ಳಿ ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆಗೆ ಖಾಸಗಿ ಸಂಸ್ಥೆಗಳು ಆಸಕ್ತಿ ತೋರುತ್ತಿವೆ. ಅದರಂತೆ ಮಾಡವೀರನಹಳ್ಳಿಯಲ್ಲಿ ಟೆಕ್ಸ್‌ಟೈಲ್ ಹಾಗೂ ಬಾಳೇನಹಳ್ಳಿಯಲ್ಲಿ ಸಿಮೆಂಟ್ ಕಾರ್ಖಾನೆಗೆ ಸಂಬಂಧಿಸಿದ ಕೈಗಾರಿಕೆ ಪ್ರಾರಂಭಕ್ಕೆ ಉದ್ಯಮಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಾಗವನ್ನು ನೀಡುವ ಮೂಲಕ ಕೈಗಾರಿಕೆ ಸ್ಥಾಪಿಸಲು ಸಿದ್ಧತೆ ಮಾಡಿಕೊಡಲಾಗುತ್ತಿದೆ.
ಪ್ರಮುಖವಾಗಿ ಮಾಡವೀರನಹಳ್ಳಿ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಸುಮಾರು ನೂರು ಎಕರೆ ಜಮೀನಿದೆ. ಇದನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಈ ಭಾಗದಲ್ಲಿ ಮಳೆಯಾಶ್ರಿತ ಕೃಷಿ ನಡೆಯುವುದರಿಂದ ಉದ್ಯೋಗಹರಿಸಿ ಯುವಸಮೂಹ ಬೆಂಗಳೂರು, ಬಾಂಬೆಯತ್ತ ಮುಖ ಮಾಡಿದ್ದಾರೆ. ಆದ್ದರಿಂದ ಕೈಗಾರಿಕೆ ಸ್ಥಾಪನೆಯಾದರೆ ಉದ್ಯೋಗಾವಕಾಶದ ಜತೆಗೆ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಸಧ್ಯದ ಮಾಹಿತಿಯಂತೆ ಟೆಕ್ಸ್‌ಟೈಲ್ ಪ್ರಾರಂಭದ ಚರ್ಚೆ ನಡೆಯುತ್ತಿದೆ. ಉದ್ಯಮಿಗಳು ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಮೊದಲಿಗೆ ಟೆಕ್ಸ್‌ಟೈಲ್ ಸ್ಥಾಪನೆಯಾದರೆ ಮುಂದಿನ ದಿನದಲ್ಲಿ ಇನ್ನಷ್ಟು ಕೈಗಾರಿಕೆಗಳು ಬರಲಿದೆ ಎನ್ನುವ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗೆ ಅವಶ್ಯಕವಿರುವ ಸೌಲಭ್ಯ ಒದಗಿಸಿಕೊಡುವ ಜವಾಬ್ದಾರಿ ಕೆಐಎಡಿಬಿ ಹೊರಬೇಕಿದೆ. ಇನ್ನು ಬಾಳೇನಹಳ್ಳಿ ಗ್ರಾಮದ ಸಮೀಪವೂ ಸುಮಾರು 50 ಎಕರೆ ಸರ್ಕಾರಿ ಜಮೀನಿದೆ. ಅಲ್ಲಿಯೂ ಕೂಡ ಸಣ್ಣಮಟ್ಟದ ಕೈಗಾರಿಕೆ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ.
ಹೆಚ್ಚಿನ ಉದ್ಯೋಗ ಸೃಷ್ಟಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಮಾಡವೀರನಹಳ್ಳಿ, ಬಾಳೇನಹಳ್ಳಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡಿದ ಅವರು, ಸರ್ಕಾರಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಮಾಜಿ ಸಚಿವ ದಿ.ಅಂಬರೀಷ್ ಅವರ ಅವಧಿಯಲ್ಲಿ ಕಂದಾಯ ಇಲಾಖೆಯಿಂದ ಸ್ಥಳ ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಲಾಗುವುದು. ಹೆಚ್ಚಿನ ಕೈಗಾರಿಕೆಗಳ ಬಂದರೆ ಉದ್ಯೋಗಾವಕಾಶ ಹೆಚ್ಚುವುದರ ಜತೆಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ ಎಂದರು.
ಮೊದಲ ಹಂತವಾಗಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕೈಗಾರಿಕೆ ಸ್ಥಾಪನೆಗೆ ಅವಶ್ಯಕವಿರುವ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಅಂತೆಯೇ ಶೀಘ್ರದಲ್ಲಿಯೇ ಅದಕ್ಕೆ ತಕ್ಕ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆನಂದ್, ತಹಸೀಲ್ದಾರ್ ವಿಜಯಕುಮಾರ್ ಸೇರಿದಂತೆ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಇದ್ದರು.