

ಮಂಗಳೂರು: ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿಯ 2023-24ಸೇ ಸಾಲಿನ ಸಂಪುಟ ಸದಸ್ಯರ ಪದಗ್ರಹಣ ಸಮಾರಂಭ- ದಿಯಾ ಆ.12ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಡಾ. ಮೆಲ್ವಿನ್ ಡಿಸೋಜಾ ಮತ್ತು ಜಿಲ್ಲಾ ಪಿಆರ್‌ಒ ವಿಜಯ ವಿಷ್ಣು ಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಪ್ರಥಮ ಮಹಿಳೆ ಸ್ಮಿತಾ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಲಿದ್ದು, 2022-24ನೇ ಸಾಲಿನ ಅಂತಾರಾಷ್ಟ್ರೀಯ ನಿರ್ದೇಶಕ ರಾಮಕೃಷ್ಣನ್ ಮಥನಗೋಪಾಲ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. 2021-23ರ ಸಾಲಿನ ಅಂತಾರಾಷ್ಟ್ರೀಯ ನಿರ್ದೇಶಕ ವಂಶಿಧರ್ ಬಾಬು ಕೆ., ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ರಾಜಶೇಖರಯ್ಯ, ಫಾದರ್ ಮುಲ್ಲರ್ಸ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುಯೆಲ್ಲೋ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಗವರ್ನರ್ ತಂಡವನ್ನು ನಿಕಟಪೂರ್ವ ರಾಜ್ಯಪಾಲ ಸಂಜಿತ್ ಶೆಟ್ಟಿ ಪರಿಚಯಿಸಲಿದ್ದು, ಜಲ್ಲಾ ಸಂಪುಟ ಸದಸ್ಯರ ಮಾಹಿತಿ ಇರುವ ಕೈಪಿಡಿ ‘ದಿಯಾ’ವನ್ನು ಪ್ರಥಮ ಉಪರಾಜ್ಯಪಾಲರಾದ ಭಾರತೀ ಬಿ.ಎಂ ಬಿಡುಗಡೆಗೊಳಿಸಲಿದ್ದಾರೆ. ದ್ವಿತೀಯ ಉಪರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಶುಭಾಶಂಸನೆಗೈಯಲಿದ್ದಾರೆ. ಈ ಸಂದರ್ಭದಲ್ಲಿ 100ಕ್ಕೂ ಅಧಿಕ ಸದಸ್ಯರು ಎಂಜೆಎಫ್ ಆಗಿ ನೋಂದಾವಣೆಗೊಳ್ಳಲಿದ್ದು ಈ ಮೂಲಕ ಸುಮಾರು 1 ಕೋಟಿ ರೂ. ದೇಣಿಗೆ ಎಲ್ಸಿಐಎಫ್(ಅಂತಾರಾಷ್ಟ್ರೀಯ ಲಯನ್ಸ್ ಫೌಂಡೇಶನ್) ಹಸ್ತಾಂತರಿಸಲಾಗುವುದು ಎಂದವರು ತಿಳಿಸಿದರು.
ಡಾ. ಮೆಲ್ವಿನ್ ಡಿಸೋಜಾ ಅವರ ನಾಯಕ್ವದಲ್ಲಿ ಲಯನ್ಸ್ ಜಿಲ್ಲೆ 317-ಡಿ ‘ಬಿ ಕೈಂಡ್’ ಘೋಷವಾಕ್ಯದೊದಿಗೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಗವರ್ನರ್ ಕಾರ್ಯಕ್ರಮದಡಿಯಲ್ಲಿ ಹಿರಿಯ ನಾಗರಿಕರ ಸೇವೆ, ವಿಶೇಷ ಮಕ್ಕಳಿಗೆ ಪ್ರೇರಣೆ, ಯುವಜನಾಂಗಕ್ಕೆ ಸ್ಪೂರ್ತಿ, ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಒಳಗೊಂಡಿವೆ. ಇದಲ್ಲದೆ ದೃಷ್ಟಿ, ಯುವಜನ, ವಿಪತ್ತು ಪರಿಹಾರ, ಮಾನವೀಯ ಸೇವೆಗಳು, ಮಧುಮೇಹ, ಬಾಲ್ಯದ ಕ್ಯಾನ್ಸರ್, ಪರಿಸರ ಮತ್ತು ಹಸಿವು ನಿವಾರಣೆಗೆ ಸಂಬಂಧಿಸಿ ಹಲವು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಬಿನೆಟ್ ಸೆಕ್ರೆಟರಿ ಒಸ್ವಾಲ್ಡ್ ಡಿ’ಸೋಜಾ, ಕ್ಯಾಬಿನೆಟ್ ಖಜಾಂಚಿ ಸುಧಾಕರ್ ಶೆಟ್ಟಿ ಬಿ. ಉಪಸ್ಥಿತರಿದ್ದರು.