ಇಂದ್ರಾಣಿ ತೀರ್ಥ ಹೊಳೆ.. ಆಗಿದೆ ಪೂರ್ತಿ ಕೊಳೆ..!!

Indrani Lead
Published on

ಹರಿಯುತ್ತಿದೆ ಒಳಚರಂಡಿ ಮಲಿನ ನೀರು!

ಜಲಮೂಲ ರಕ್ಷಣೆ ಮಾಡೋರು ಯಾರು?

ಪ್ರಶಾಂತ ಭಾಗ್ವತ, ಉಡುಪಿ

ಜನಸಂಖ್ಯೆ ಬೆಳೆದಂತೆಲ್ಲ ಅಭಿವೃದ್ಧಿ ನೆಪದಲ್ಲಿ ನೈಸರ್ಗಿಕ ಕೊಡುಗೆಗಳಿಗೆ ಕೊಡಲಿಯೇಟು ಬೀಳತೊಡಗಿದೆ. ಎಲ್ಲವನ್ನೂ ಭವಿಷ್ಯದ ದೃಷ್ಟಿಕೋನದಿಂದ ಕೈಗೊಳ್ಳುವ ಮನುಷ್ಯ, ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನೇ ನಾಶಮಾಡುತ್ತಿದ್ದಾನೆ. ಇದಕ್ಕೆ ನೈಜ ಸಾಕ್ಷಿ ಇಂದ್ರಾಣಿ ತೀರ್ಥ ಹೊಳೆ.

Indrani 2
ಮಣಿಪಾಲದ ಇಂದ್ರಾಣಿಯಲ್ಲಿ ಹುಟ್ಟಿ, ಉಡುಪಿ ನಗರದಲ್ಲಿ ಸಾಗಿ ಸಮುದ್ರ ಸೇರುವ ಇಂದ್ರಾಣಿ ತೀರ್ಥ ಹೊಳೆ ಇದೀಗ ಸಂಪೂರ್ಣ ಕಲುಷಿತಗೊಂಡಿದೆ. ನಗರ ಭಾಗದಲ್ಲಿರುವ ಕಾಲುವೆ ಮತ್ತು ಒಳಚರಂಡಿಗಳನ್ನು ಅಲ್ಲಲ್ಲಿ ಹೊಳೆಗೆ ಜೋಡಣೆ ಮಾಡಿದ್ದು, ಶುದ್ಧವಾಗಿ ಹರಿಯುತ್ತಿದ್ದ ಹೊಳೆಯೀಗ ಗಬ್ಬೆದ್ದು ನಾರುತ್ತಿದೆ.

ಮಲಿನ ನೀರು ಸೇರ್ಪಡೆ

ಇಂದ್ರಾಣಿ ತೀರ್ಥ ಹೊಳೆಯಲ್ಲೀಗ ಶುದ್ಧ ಜಲಕ್ಕಿಂತ ಒಳಚರಂಡಿಯ ಮಲಿನ ನೀರು ಸೇರಿ ಕಪ್ಪು ಬಣ್ಣ ಮಿಶ್ರಿತ ಗಬ್ಬು ನಾರುತ್ತಿರುವ ಕೊಳಕು ನೀರು ಹರಿಯುತ್ತಿದೆ. ಇದರಿಂದಾಗಿ ಹೊಳೆಯ ಸುತ್ತಮುತ್ತಲಿನ ಮನೆಗಳ ಬಾವಿ ಹಾಗೂ ಕೆರೆಗಳಿಗೆ ಕಲುಷಿತ ನೀರು ಸೇರುತ್ತಿದ್ದು, ನೀರು ಬಳಸಲಾಗದ ಸ್ಥಿತಿ ಬಂದಿದೆ. ಗದ್ದೆಗಳಲ್ಲೂ ಮಲಿನ ನೀರು ಹರಿಯುತ್ತಿದ್ದು ಭತ್ತ, ತರಕಾರಿ ಸಹಿತ ಯಾವುದೇ ಕೃಷಿ ಮಾಡಲಾಗದ ಸಂದಿಗ್ಧತೆಯೂ ಉಂಟಾಗಿದೆ.

ಶೌಚಾಲಯದ ನೀರು ಹೊಳೆಗೆ!

Indrani 3
ಇಂದ್ರಾಣಿ ತೀರ್ಥ ಹೊಳೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಮನೆಗಳಿವೆ. ಅಪಾರ್ಟ್​ಮೆಂಟ್​ಗಳೂ ನಿಮಾರ್ಣಗೊಂಡಿವೆ. ಆದರೆ, ಈ ಭಾಗದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮನೆಗಳ ಶೌಚಾಲಯದ ನೀರನ್ನು ಇಂದ್ರಾಣಿ ಹೊಳೆಗೆ ಬಿಡಲಾಗುತ್ತಿದೆ. ನಗರಸಭೆ ಕೆಲವರಿಗೆ ನೋಟಿಸ್​ ನೀಡಿ ಕೈತೊಳೆದುಕೊಳ್ಳುತ್ತಿದೆ. ಹೀಗಾದರೆ ಜಲಮೂಲದ ರಕ್ಷಣೆ ಯಾರ ಹೊಣೆ? ಎಂಬ ಪ್ರಶ್ನೆ ಉದ್ಭವಿಸಿದೆ.

ತೋಡಿಗೆ ಡ್ರೈನೇಜ್​ ಪೈಪ್​ ಅಳವಡಿಕೆ!

Indrani 4
ಉಡುಪಿಯ ಮೂಡನಿಡಂಬೂರು ಗ್ರಾಮದಲ್ಲಿ ನೇರಳಕಟ್ಟೆ ತೋಡು ಇತ್ತು. ಇಲ್ಲಿ ಕೃಷಿ ಚಟುವಟಿಕೆಗಾಗಿ ಕಿಂಡಿ ಅಣೆಕಟ್ಟು ನಿರ್ಮಿಸಿ ಹಲಗೆ ಹಾಕಲಾಗುತ್ತಿತ್ತು. ಪಕ್ಕದಲ್ಲಿಯೇ ನಾಗಬ್ರಹ್ಮ ಸ್ಥಾನ, ಬ್ರಹ್ಮ ಬೈದರ್ಕಳ ಗರಡಿಯೂ ಇದೆ. ಇದರ ಪಕ್ಕದಲ್ಲೇ ನೇರಳಕಟ್ಟೆ ತೋಡಿಗೆ ಡ್ರೈನೇಜ್​ ಪೈಪ್​ ಅಳವಡಿಸಲಾಗಿದೆ. ಕೆಲವು ತಿರುವುಗಳಲ್ಲಿ ಕಾಂಕ್ರೀಟ್​ ಕಾಮಗಾರಿಯನ್ನೂ ಮಾಡಲಾಗಿದೆ. ಈ ಹಿಂದೆ ಕಲ್ಲಿನಲ್ಲಿ ತಡೆಗೋಡೆ ಕಟ್ಟಿದ್ದರು. ಅವುಗಳೀಗ ನೀರಿನ ರಭಸಕ್ಕೆ ಕಿತ್ತುಹೋಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತಲಿನ ಖಾಸಗಿ ವಸತಿ ಸಮಚ್ಚಯ ಹಾಗೂ ಹೋಟೆಲ್​ಗಳ ಶೌಚಾಲಯಗಳ ಮಲಿನ ನೀರನ್ನೂ ಸಹ ಕಲ್ಸಂಕದಲ್ಲಿ ಹರಿಯುವ ಇಂದ್ರಾಣಿ ಹೊಳೆಗೇ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ವೀಸ್​ ಬಸ್​ ನಿಲ್ದಾಣದ ಹಾಗೂ ಸುತ್ತಮುತ್ತಲಿನ ಕೆಲ ಕಟ್ಟಡಗಳ ಶೌಚಾಲಯದ ನೀರೂ ಸಹ ಸೇರುತ್ತಿದೆ. ಮಠದ ಬೆಟ್ಟುವಿನಲ್ಲೂ ಸಹ ಕೊಳಚೆ ನೀರು ಸೇರಿ ಕಲ್ಮಾಡಿ ಮಾರ್ಗವಾಗಿ ಸಮುದ್ರ ಸೇರುತ್ತಿದೆ.

ಉಡುಪಿ ನಗರದಲ್ಲಿ ಡ್ರೈನೇಜ್​ ವ್ಯವಸ್ಥೆಯೇ ಸಮರ್ಪಕವಾಗಿಲ್ಲ. ಹೀಗಾಗಿ ಜಲಮೂಲಗಳಿಗೂ ಚರಂಡಿ ನೀರು ಸೇರುವಂತಾಗಿದೆ. ಅನೇಕರು ಅಕ್ರಮವಾಗಿ ಮನೆಯ ಮಲಿನ ನೀರನ್ನು ತೋಡಿಗೆ ಬಿಡುತ್ತಿದ್ದಾರೆ. ಜಲಮೂಲಗಳ ರಕ್ಷಣೆಗಾಗಿ ಅಲ್ಲಲ್ಲಿ ಡ್ರೈನೇಜ್​ ಶುದ್ಧೀಕರಣ ಘಟಕ ನಿರ್ಮಿಸಿ ಪ್ರತ್ಯೇಕವಾಗಿ ತೋಡುಗಳ ಪಕ್ಕದಲ್ಲಿಯೇ ಡ್ರೈನೇಜ್​ ನಿರ್ಮಿಸಿ ಸಮುದ್ರ ಸೇರುವಂತೆ ಮಾಡಬೇಕು. | ಗಣೇಶರಾಜ ಸರಳಬೆಟ್ಟು. ಸಾಮಾಜಿಕ ಕಾರ್ಯಕರ್ತ, ಮಣಿಪಾಲ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಸಂಕ, ಕಿನ್ನಿಮುಲ್ಕಿ, ಕಪ್ಪೆಟ್ಟು ಹಾಗೂ ಶಾರದಾ ಹೋಟೆಲ್​ ಸಮೀಪ ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ವೆಟ್​ವೆಲ್​ ಸುವ್ಯವಸ್ಥೆಗಾಗಿ ನ್ಯಾಷನಲ್​ ಗ್ರೀನ್​ ಟ್ರಿಬಿನಲ್​ (ಎನ್​ಜಿಟಿ)ನಿಂದ ಅಂದಾಜು 32 ಕೋಟಿ ರೂ.ಗಳ ಟೆಂಡರ್​ ಆಗಿದೆ. ಕಾಮಗಾರಿ ಮುಗಿದ ಬಳಿಕ ಖಾಸಗಿಯವರಿಗೆ ನಿರ್ವಹಣೆಯ ಜವಾಬ್ದಾರಿ ನೀಡಲಾಗುವುದು. | ಪ್ರಭಾಕರ ಪೂಜಾರಿ. ಅಧ್ಯಕ್ಷ, ಉಡುಪಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net