

ಚಿಕ್ಕಬಳ್ಳಾಪುರ: ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಇಂದ್ರಧನುಷ್ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಅಭಿಯಾನವನ್ನು ಮೂರು ಹಂತದಲ್ಲಿ (ಆ.7 ರಿಂದ ಆ.12, ಸೆ.11 ರಿಂದ ಸೆ.16, ಅ.9 ರಿಂದ ಅ.14 ರವರೆಗೆ ಕೈಗೊಳ್ಳಲಾಗಿದೆ. ಪ್ರತಿ ತಿಂಗಳಲ್ಲಿ 6 ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ.
ಲಸಿಕೆಯಿಂದ ವಂಚಿತರಾದ ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಮಕ್ಕಳ ಹೆಸರನ್ನು ಇಲಾಖೆಯ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲಿದ್ದು ಆಯಾ ವ್ಯಾಪ್ತಿಯಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ಸಂಪರ್ಕಿಸಿ, ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಜಿಲ್ಲಾದ್ಯಂತ ಐಎಂಐ ಮೊದಲನೇ ಸುತ್ತಿಗೆ 364 ಗರ್ಭಿಣಿಯರು ಮತ್ತು 2 ವರ್ಷದೊಳಗಿನ 2027 ಮಕ್ಕಳು, 2 ರಿಂದ 5 ವರ್ಷದೊಳಗಿನ 19 ಮಕ್ಕಳನ್ನು ಗುರುತಿಸಿದ್ದು 42 ಮೊಬೈಲ್ ಟೀಮ್ ಲಸಿಕಾ ಕೇಂದ್ರಗಳು ಮತ್ತು 478 ಐಎಂಐ ಲಸಿಕಾ ಕೇಂದ್ರಗಳನ್ನು ಲಸಿಕೆ ಹಾಕಲು ಸ್ಥಾಪಿಸಲಾಗಿದೆ.
*ಸಹಾಯವಾಣಿ ಸಂಪರ್ಕ
2023 ರ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಗುರಿ ಹೊಂದಿದ್ದು ಇದಕ್ಕೆ ಲಸಿಕಾ ಪ್ರಕ್ರಿಯೆ ಹಾಗೂ ಪಿಸಿವಿ 3ನೇ ಡೋಸ್ ಲಸಿಕಾ ಪ್ರಕ್ರಿಯೆಯ ವೇಗ ಹೆಚ್ಚಳದ ಅಭಿಯಾನ ನಡೆಯುತ್ತಿದೆ. ಈ ಲಸಿಕಾಕರಣದ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿಗಳ ಕಚೇರಿ, ಸಹಾಯವಾಣಿ ಸಂಖ್ಯೆ: 8277892422 ಅನ್ನು ಸಂಪರ್ಕಿಸಬಹುದಾಗಿದೆ.
*ಮದ್ರಾಸ್ ಐನ ಭಯ ಬೇಡ
ಕೆಲ ದಿನಗಳಿಂದ ಹವಾಮಾನದಲ್ಲಿನ ಏರುಪೇರಿನಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು ಕೆಲವು ಜನರಲ್ಲಿ ಕಣ್ಣಿನ ಉರಿ, ಊತ ಸಮಸ್ಯೆ ಕಂಡು ಬರುತ್ತಿದೆ. ಇದಕ್ಕೆ ಭಯ ಬೀಳುವುದು ಬೇಡ. ಆದರೆ, ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಹೇಶ್ ಕುಮಾರ್ ತಿಳಿಸಿದ್ದಾರೆ.
ಕಣ್ಣಿನ ಬಿಳಿ ಭಾಗವು ಕೆಂಪಾಗುವಿಕೆ, ಕಣ್ಣುಗಳಲ್ಲಿ ಉರಿ ಮತ್ತು ನೋವು, ಕಣ್ಣುಗಳಿಂದ ನಿರಂತರವಾಗಿ ನೀರು ಹೊರ ಬರುವಿಕೆ, ಕಣ್ಣುಗಳು ಊದುಕೊಳ್ಳುವಿಕೆಯು ರೋಗ ಲಕ್ಷಣಗಳು. ಇಂತಹ ಸಮಸ್ಯೆ ಹೊಂದಿರುವವರು ಜನಸಂದಣಿ ಇರುವ ಪ್ರದೇಶಗಳಿಗೆ ಹೋಗಬಾರದು. ಪದೇ ಪದೇ ಕಣ್ಣುಗಳನ್ನು ಕೈಗಳಿಂದ ಮುಟ್ಟದಿರುವಿಕೆ, ಸೋಪ್‌ನಲ್ಲಿ ಆಗಾಗ ಕೈ ತೊಳೆಯುವಿಕೆ, ಮದ್ರಾಸ್ ಐ ಬಂದ ವ್ಯಕ್ತಿ ಉಪಯೋಗಿಸಿದ ಟವಲ್ ಮತ್ತು ತಲೆ ದಿಂಬನ್ನು ಬಳಸದಿರುವಿಕೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಮದ್ರಾಸ್ ಐ ರೋಗ ಐದಾರು ದಿನಗಳಲ್ಲಿ ಕಡಿಮೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳನ್ನು ಹಾಗೂ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದೆಂದು ತಿಳಿಸಿದ್ದಾರೆ.