

ಮಂಡ್ಯ: ತಾಯಂದಿರು ಕಾಲಕಾಲಕ್ಕೆ ತಕ್ಕಂತೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ಅಂತೆಯೇ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ನಗರದ ಹೊಸಹಳ್ಳಿ ಬಡಾವಣೆಯ ರಾಮಮಂದಿರದ ಎದುರು ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕಾ ಅಭಿಯಾನ 5.0ಗೆ ಚಾಲನೆ ನೀಡಿ ಮಾತನಾಡಿದ ಅವರು, 2023ರ ಅಂತ್ಯದೊಳಗೆ ದೇಶಾದ್ಯಂತ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳಿಂದ ವಂಚಿತರಾದ ಗರ್ಭಿಣಿಯರು ಮತ್ತು 0 ಯಿಂದ 5 ವರ್ಷದ ಮಕ್ಕಳಿಗೆ ಇಂದ್ರಧನುಷ್ ಅಭಿಯಾನದ ಮೂಲಕ ಲಸಿಕೆ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಪದೇ ಪದೇ ಒಂದಲ್ಲ ಒಂದು ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕೋವಿಡ್ ಬಂದು ಇಡೀ ಪ್ರಪಂಚವೇ ತಲ್ಲಣಗೊಂಡು ಜನರು ಪಡಬಾರದ ಕಷ್ಟ ಅನುಭವಿಸಿದರು. ನಾವು ಸೇವಿಸುವ ಗಾಳಿ, ಬೆಳಕು, ಆಹಾರವೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಿಂದಿನ ಕಾಲದಲ್ಲಿ ಆಸ್ಪತೆಗೆ ಹೋಗದ ಎಷ್ಟೋ ಜನ ಇದ್ದರು. ಆದರೆ, ಇಂದು ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ವಯಸ್ಸಿನ ಇತಿಮಿತಿ ಇಲ್ಲ. ಯುವಕರ ಮೇಲೆಯೇ ಹೆಚ್ಚು ಪರಿಣಾಮ ಬಿರುತ್ತಿದೆ. ಆದ್ದರಿಂದ ಆಯಾ ಕಾಲಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಐಎಂಐ-5.0 ಮೊದಲನೇ ಸುತ್ತಿಗೆ ಜಿಲ್ಲೆಯಲ್ಲಿ 0-2 ವರ್ಷದ ಮಕ್ಕಳು 2,916, 2 ರಿಂದ 5 ವರ್ಷದೊಳಗಿನ ಮಕ್ಕಳು 99, ಗರ್ಭಿಣಿಯರು 532 ಜನರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 493 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುವುದು. ಮೊದಲ ಹಂತದಲ್ಲಿ ಆ.7 ರಿಂದ 14ರ ವರೆಗೆ, ಸೆ. 11ರಿಂದ 16ರ ವರೆಗೆ ಹಾಗೂ ಅ.9ರಿಂದ 14ರ ವರೆಗೆ ಲಸಿಕೆ ನೀಡಲಾಗುವುದು. ರೋಗಗಳನ್ನು ನಿರ್ಮೂಲನೆ ಮಾಡಲು ಎಲ್ಲ ತಾಯಂದಿರು ಸಹಕರಿಸಬೇಕೆಂದು ಮನವಿ ಮಾಡಿದರು.
ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ನಗರಸಭೆ ಸದಸ್ಯರಾದ ಪವಿತ್ರಾ ಬೋರೇಗೌಡ, ಪೂರ್ಣಿಮಾ ಇತರರಿದ್ದರು.