

ಸಿದ್ದಾಪುರ: ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನದ ಪೂರ್ವಭಾವಿ ಸಭೆ ಶನಿವಾರ ಜರುಗಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ದೇಶದಲ್ಲಿ 2014ರಿಂದ ಇಂದ್ರ ಧನುಷ್ ಕಾರ್ಯಕ್ರಮ ಮಾಡಲಾಗುತ್ತಿದೆ. ಇದರ ಉದ್ದೇಶ ಜನನವಾಗುವ ಎಲ್ಲ ಮಕ್ಕಳಿಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಮಾರಕ ರೋಗಗಳನ್ನು ತಡೆಯಲು ಪ್ರಸ್ತುತ 12 ರೋಗಗಳ ವಿರುದ್ಧ ಲಸಿಕೆ ನೀಡುತ್ತಿರುವ ಕುರಿತು ಮಾಹಿತಿ ನೀಡಿ, ತಾಲೂಕಿನಲ್ಲಿ ಆ. 7ರಿಂದ 12ರವರೆಗೆ ಅಭಿಯಾನ ನಡೆಯಲಿದೆ. 29 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, 78 ಮಕ್ಕಳಿಗೆ ಹಾಗೂ 30 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಿಷನ್ ಇಂದ್ರ ಧನುಷ್ 5.0 ಅಭಿಯಾನದ ಬಿತ್ತಿಪತ್ರ ಅನಾವರಣಗೊಳಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರ್ಣಿಮಾ, ಪಪಂ ಮುಖ್ಯಾಧಿಕಾರಿ ಐ.ಜಿ. ಕೊನ್ನೂರು, ತೋಟಗಾರಿಕಾ ಇಲಾಖೆಯ ಮಹಾಬಲೇಶ್ವರ ಬಿ.ಎಸ್., ಕೃಷಿ ಅಧಿಕಾರಿ ಸುಮಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಬಂಡೇರ, ಅಧಿಕಾರಿಗಳು ಇದ್ದರು. ಅರಣುಕುಮಾರ ಕಾರ್ಯಕ್ರಮ ನಿರ್ವಹಿಸಿದರು.