ಮಿಷನ್ ಇಂಧ್ರಧನುಷ್ ಅಭಿಯಾನಕ್ಕೆ ಚಾಲನೆ

07raju13
Published on

ಚಾಮರಾಜನಗರ: ಮಾರಕ ರೋಗಗಳ ವಿರುದ್ದ ಹೋರಾಡುವ ಲಸಿಕೆಗಳನ್ನು ಗರ್ಭಿಣಿಯರು ಹಾಗೂ ಮಕ್ಕಳಿಗೆ ತಪ್ಪದೆ ಕಾಲ ಕಾಲಕ್ಕೆ ಕೊಡಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ತೀವ್ರತರ ಮಿಷನ್ ಇಂಧ್ರಧನುಷ್ ಅಭಿಯಾನ 5.0 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ದಡಾರ, ರುಬೆಲ್ಲಾ ನಿರ್ಮೂಲನೆ ಮಾಡಲು ಲಸಿಕೆ ನೀಡಲಾಗುತ್ತಿದೆ. ಇನ್ನಿತರ ರೋಗಗಳ ನಿರೋಧಕ ಶಕ್ತಿಗಾಗಿ ಕಾಲಕಾಲಕ್ಕೆ ಲಸಿಕೆ ಕೊಡಲಾಗುತ್ತಿದೆ. ಮಕ್ಕಳು ಗರ್ಭಿಣಿಯರಿಗೆ ಲಸಿಕೆ ನೀಡುವ ಸಲುವಾಗಿ ಮಿಷನ್ ಇಂಧ್ರಧನುಷ್ ಕಾರ್ಯಕ್ರಮದ ಮೂಲಕ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಅನಾರೋಗ್ಯ ನಿವಾರಣೆಗೆ ಆರೋಗ್ಯ ಇಲಾಖೆಯ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಮಾತನಾಡಿ, ಇಂದ್ರಧನುಷ್ 5.0 ಅಭಿಯಾನವು ಲಸಿಕೆಯನ್ನು ಪಡೆಯದ ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಲಸಿಕೆ ನೀಡುವ ಕಾರ್ಯಕ್ರಮವಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆಯ ಪ್ರಯೋಜನಗಳ ಬಗ್ಗೆ ತಿಳಿಸಿ ಅಭಿಯಾನ ಯಶಸ್ವಿಯಾಗಿಸಲು ಮುಂದಾಗಿದ್ದಾರೆ. ಲಸಿಕೆಯನ್ನು ಪಡೆಯದ ಮಕ್ಕಳು ಗರ್ಭಿಣಿಯರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಿಷನ್ ಇಂದ್ರಧನುಷ್ ಅಭಿಯಾನ ಜಾಗೃತಿ ಕುರಿತ ಪೋಸ್ಟರ್ ಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಆರ್.ಸಿ.ಎಚ್. ಅಧಿಕಾರಿ ಡಾ. ಮಂಜುನಾಥ್, ನಗರಸಭಾ ಸದಸ್ಯ ಅಪ್ಸರ್ ಪಾಷ, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಡಾ. ಉಮಾರಾಣಿ, ಡಾ.ಮಮತ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net