ಮೈಸೂರಿನಲ್ಲಿ ‘ಇಂದೋರ್’ ಮಾದರಿ ಸ್ವಚ್ಛತೆ

mcc
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿನತ್ತ ದೇಶವೇ ತಿರುಗಿ ನೋಡುವ ಸ್ಥಿತಿ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ, ಪ್ರಸ್ತುತ ಸ್ವಚ್ಛತೆಗೆ ಇಂದೋರ್ ದೇಶಕ್ಕೆ ಮಾದರಿಯಾಗಿದೆ. ‘ಸ್ವಚ್ಛ ಇಂದೋರ್’ ನಿರ್ಮಾಣಕ್ಕೆ ಇಂದೋರ್ ಮಹಾನಗರ ಪಾಲಿಕೆ ರೂಪಿಸಿದ ಯೋಜನೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಜಾರಿಗೊಳಿಸಲು ನಗರ ಪಾಲಿಕೆ ಚಿಂತನೆ ನಡೆಸಿದೆ.

ಮೇಯರ್ ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ, ಬುಧವಾರ ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿ ಇಂದೋರ್ ಮಹಾನಗರ ಪಾಲಿಕೆ ಸ್ವಚ್ಛತೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು, ನೂತನ ಯೋಜನೆಗಳ ಕುರಿತು ಅಧ್ಯಯನ ನಡೆಸಿತು. ಮೈಸೂರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ನಂ.1 ಸ್ಥಾನ ಪಡೆಯಬೇಕಾದರೆ ಇಂದೋರ್ ಮಾದರಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಜತೆಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅವಶ್ಯಕತೆಯೂ ಇದೆ.

ಎರಡು ಪಾಳಿಯಲ್ಲಿ ಸ್ವಚ್ಛತೆ

ಇಂದೋರ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ವಚ್ಛತೆ ವಿಚಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರು ಕೈ ಜೋಡಿಸಿರುವುದು ಇಂದೋರ್‌ನ ವಿಶೇಷ. ಇಂದೋರ್‌ನಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಎಲ್ಲೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ಕಾಣಲು ಸಾಧ್ಯವಿಲ್ಲ. ಅಷ್ಟೊಂದು ಸ್ವಚ್ಛತೆ ಕಾಪಾಡಲು ಅಲ್ಲಿ ಎರಡು ಪಾಳಿಯಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದೇ ಪ್ರಮುಖ ಕಾರಣ. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅದೇ ರೀತಿ ಕಮರ್ಷಿಯಲ್ ಸ್ಟ್ರೀಟ್, ಕೈಗಾರಿಕೆಗಳಿಂದ ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ತ್ಯಾಜ್ಯ ಸಂಗ್ರಹಿಸುವ ಪ್ರತಿಯೊಂದು ವಾಹನ ಎಷ್ಟು ಹೊತ್ತಿಗೆ ಹೊರಟಿದೆ? ಎಷ್ಟು ಹೊತ್ತಿಗೆ ಹಿಂತಿರುಗಿದೆ? ಸೂಚಿಸಿದ ಸ್ಥಳಕ್ಕೆ ನಿಗದಿತ ಸ್ಥಳಕ್ಕೆ ತಲುಪಿದೆಯೇ ಎಂಬುದನ್ನು ಪ್ರತಿನಿತ್ಯ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ತ್ಯಾಜ್ಯದಿಂದ ಕೋಟ್ಯಾಂತರ ಆದಾಯ

ಇಂದೋರ್ ನಗರವು ತ್ಯಾಜ್ಯದಿಂದ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದೆ. ನಗರದಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಸಲಾಗುತ್ತಿದೆ. ಬಯೋಗ್ಯಾಸ್ ಘಟಕವವನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಕಂಪನಿಯು ನಗರ ಪಾಲಿಕೆಗೆ ವಾರ್ಷಿಕ 2.50 ಕೋಟಿ ರೂ.ಗಳನ್ನು ನೀಡಲಿದೆ. ಈ ಬಯೋಗ್ಯಾಸ್‌ಅನ್ನು ಇಂದೋರ್‌ನ ಸರ್ಕಾರಿ ಸಿಎನ್‌ಜಿ ಬಸ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಒಣಕಸದಲ್ಲಿ ಪೇಪರ್, ಪ್ಲಾಸ್ಟಿಕ್, ಕಬ್ಬಿಣ, ಗಾಜಿನ ಬಾಟಲಿಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಉಳಿದ ತ್ಯಾಜ್ಯವನ್ನು ಮರುಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಒಟ್ಟು 6 ಕಡೆಗಳಲ್ಲಿ ಕಟ್ಟಡ ತ್ಯಾಜ್ಯಗಳನ್ನು (ಡಬ್ರಿಸ್) ವಿಲೇವಾರಿ ಮಾಡಲು ಜಾಗ ಒದಗಿಸಲಾಗಿದ್ದು, ಈ ಕಟ್ಟಡ ತ್ಯಾಜ್ಯದಿಂದ ಟೈಲ್ಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಇಂದೋರ್ ಆದಾಯ ಗಳಿಸುತ್ತಿದೆ.

ಬಯೋಗ್ಯಾಸ್ ಘಟಕ ಅಳವಡಿಕೆ ಚಿಂತನೆ

ಇಂದೋರ್ ಮಾದರಿಯಲ್ಲಿ ನಗರದಲ್ಲೂ ಬಯೋಗ್ಯಾಸ್ ಅಳವಡಿಸಲು ನಗರ ಪಾಲಿಕೆಯು ಚಿಂತನೆ ನಡೆಸಿದೆ. ಪ್ರಸ್ತುತ ಸೂಯೇಜ್ ಫಾರ್ಮ್, ಕೆಸರೆ ಹಾಗೂ ರಾಯನಕೆರೆಯಲ್ಲಿ ಪ್ರತಿನಿತ್ಯ 600 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕ ಅಳವಡಿಸಲಾಗಿದೆ. ಇಲ್ಲಿ ಗೊಬ್ಬರ ತಯಾರಿಕೆಗೆ ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ಸಾಕಾಗುತ್ತದೆ. ಆದರೆ, ಬಯೋಗ್ಯಾಸ್ ಘಟಕ ಅಳವಡಿಸಿದರೆ ಮತ್ತಷ್ಟು ತ್ಯಾಜ್ಯದ ಅವಶ್ಯಕತೆ ಇದೆ. ಅಂತಹ ಸಂದರ್ಭದಲ್ಲಿ ನಗರಕ್ಕೆ ಹೊಂದಿಕೊಂಡಿರುವ ನಗರಸಭೆ, ಪಟ್ಟಣ ಪಂಚಾಯಿತಿಗಳಿಂದಲೂ ತ್ಯಾಜ್ಯ ಪಡೆಯಬಹುದೇ ಎಂಬ ಕುರಿತು ಪಾಲಿಕೆ ಚಿಂತನೆ ನಡೆಸುತ್ತಿದೆ. ಬಯೋಗ್ಯಾಸ್ ಘಟಕ ಅಳವಡಿಕೆಯ ಸಾಧಕ ಬಾಧಕ ಅಧ್ಯಯನ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎನ್ನುತ್ತಾರೆ ನಗರ ಪಾಲಿಕೆ ಮೇಯರ್ ಶಿವಕುಮಾರ್

ಸ್ವಚ್ಛತೆಯಲ್ಲಿ ನಗರದ ಸಾಧನೆ

2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯ ಸಮಗ್ರ ವಿಭಾಗದಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. 2017 ರಿಂದ 2022ರವರೆಗೆ ಸತತ 6 ಬಾರಿ ಇಂದೋರ್ ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಪಡೆದುಕೊ ಂಡಿದೆ. ಸ್ವಚ್ಛತೆಯಲ್ಲಿ ಇಂದೋರ್ ನಗರ ಪ್ರತಿ ವರ್ಷ ಹಲವಾರು ಸುಧಾರಣೆಗಳನ್ನು ತರುತ್ತಿರುವ ಪರಿಣಾಮ ನಂ.1 ಪಟ್ಟವನ್ನು ಇಂದಿಗೂ ಕಾಯ್ದುಕೊಂಡಿದೆ. ಸ್ವಚ್ಛತೆಗೆ ಇಂದೋರ್ ನಗರದ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜತಗೆ ಜನರು ಸಹ ಕೈಜೋಡಿಸುತ್ತಿದ್ದಾರೆ. ಮೈಸೂರು ನಗರದಲ್ಲೂ ಇಂದೋರ್ ಮಾದರಿಯಲ್ಲಿ ಹಲವಾರು ಉತ್ತಮ ವ್ಯವಸ್ಥೆಗಳು ಇದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿ.

ದೇಶದ ನಂ.1 ಸ್ವಚ್ಛ ನಗರಿ ಇಂದೋರ್ ಮಾದರಿಯಲ್ಲಿಯೇ ಸ್ವಚ್ಛತೆಗೆ ಸಂಬಂಧಿಸಿದಂತೆ ನಮ್ಮಲ್ಲೂ ಸಾಕಷ್ಟು ಉತ್ತಮ ವ್ಯವಸ್ಥೆಗಳು ಇವೆ. ಆದರೆ, ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಮಾತ್ರ ನಗರ ಸ್ವಚ್ಛತೆಯಲ್ಲಿ ಮತ್ತೆ ನಂ.1 ಸ್ಥಾನ ಪಡೆಯಲು ಸಾಧ್ಯ. ನಮ್ಮಲ್ಲಿ ಪ್ರಸ್ತುತ ಒಂದು ಪಾಳಿಯಲ್ಲಿ ಮಾತ್ರ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಇಂದೋರ್ ಮಾದರಿಯಲ್ಲಿ ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಅವಶ್ಯಕತೆ ಇದೆ. ಬಯೋಗ್ಯಾಸ್ ಘಟಕ ಅಳವಡಿಸಿಕೊಂಡು ಕಸದಿಂದ ಆದಾಯ ಗಳಿಸುವ ಕಡೆಗೂ ಚಿಂತನೆ ನಡೆಸುತ್ತಿದ್ದೇವೆ.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net