

ಬೆಂಗಳೂರು: ರಾಜಧಾನಿಯಲ್ಲಿ ಕಸ ನಿರ್ವಹಣೆಗೆ ಆಯ್ಕೆ ಮಾಡಿಕೊಂಡಿರುವ ಎರಡು ವಾರ್ಡ್ಗಳ ಪೈಕಿ ಜಕ್ಕೂರಿನಲ್ಲೂ ಜನರಲ್ಲಿ ಕಸ ವಿಂಗಡಣೆ ಕುರಿತು ಸಾಕಷ್ಟು ಜಾಗೃತಿ ಮೂಡಿದೆ. ಈ ಹಿಂದೆ ಕಸ ವಿಂಗಡಣೆ ನಗಣ್ಯ ಎನ್ನುವಂತಿದ್ದ ಪರಿಸ್ಥಿತಿ ಕಳೆದೊಂದು ತಿಂಗಳಲ್ಲಿ ಶೇ.70 ಬದಲಾಗಿದೆ. ನಾಗರಿಕರು ಹಸಿ ಹಾಗೂ ಒಣ ಕಸವನ್ನು ವಿಂಗಡಿಸುತ್ತಿದ್ದಾರೆ. ಬೆಳಗಿನ ಸಮಯ ಮಾತ್ರ ಬಿಬಿಎಂಪಿ ಕಸ ಸಂಗ್ರಹಿಸುವುದರಿಂದ ಸಮಸ್ಯೆ ಎದುರಿಸುತ್ತಿದ್ದ ವಾಣಿಜ್ಯೋದ್ಯಮ, ಅಂಗಡಿ ಮಳಿಗೆಗಳಿಂದ ದಿನಕ್ಕೆ ಎರಡು ಬಾರಿ ಕಸ ಸಂಗ್ರಹಿಸುತ್ತಿರುವುದು ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ರಾತ್ರಿ ರಾತ್ರಿ 8ರಿಂದ 9ರವರೆಗೆ ಕೂಡ ಕಸ ಸಂಗ್ರಹಣೆ ಮಾಡಲಾಗುತ್ತಿದೆ.
ಜಕ್ಕೂರು ಮುಖ್ಯರಸ್ತೆಯಲ್ಲಿ ಹೋಟೆಲ್ ನಡೆಸುತ್ತಿರುವ ಹರೀಶ್ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಹೋಟೆಲ್ನಲ್ಲಿ ಪ್ರತಿನಿತ್ಯ ಕಸ ವಿಂಗಡಣೆ ಮಾಡಿ ನೀಡುತ್ತೇವೆ. ಅದಕ್ಕಾಗಿ 3 ಬಾಕ್ಸ್ ಮಾಡಿದ್ದು ಪ್ಲಾಸ್ಟಿಕ್, ಅಡುಗೆ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಎಲ್ಲವನ್ನೂ ಪ್ರತ್ಯೇಕಿಸುತ್ತೇವೆ. ರಾತ್ರಿ ವೇಳೆಯಲ್ಲೂ ಬಿಬಿಎಂಪಿ ಟಿಪ್ಪರ್ ಆಟೋಗಳು ಕಸ ಸಂಗ್ರಹಿಸುವುದರಿಂದ ತ್ಯಾಜ್ಯದ ಸಮಸ್ಯೆ ದೂರವಾಗಿದೆ ಎನ್ನುತ್ತಾರೆ.
ನಮ್ಮ ಹೋಟೆಲ್ನಲ್ಲಿ ಮೊದಲು ಅಡುಗೆಮನೆಯ ತ್ಯಾಜ್ಯ 2-3 ದಿನ ಸಂಗ್ರಹವಾಗಿ ದುರ್ವಾಸನೆ ಬರುತ್ತಿತ್ತು. ರಾತ್ರಿ ವೇಳೆ ಅಂಗಡಿಯಲ್ಲಿ ಇಟ್ಟುಕೊಂಡು ಬೆಳಗ್ಗೆ ವಾಹನಕ್ಕೆ ನೀಡುತ್ತಿದ್ದೆವು. ಇದರಿಂದ ಜಿರಲೆೆಗಳ ಕಾಟ ಹೆಚ್ಚಾಗಿತ್ತು. ಈಗ ಆ ಸಮಸ್ಯೆ ನಿವಾರಣೆಯಾಗಿದೆ ಎಂದು ಅದೇ ರಸ್ತೆಯ ಮತ್ತೊಂದು ಹೋಟೆಲ್ನ ಮಾಲೀಕ ಮಹದೇವು ನಿರಾಳತೆ ವ್ಯಕ್ತಪಡಿಸುತ್ತಾರೆ.
ನಾಗರಿಕರ ಕರ್ತವ್ಯ: ಮನೆ ಅಥವಾ ವ್ಯಾಪಾರದ ತಾಣಗಳಲ್ಲಿ ಕಸವನ್ನು ವಿಂಗಡಣೆ ಮಾಡಿ ನೀಡುವುದು ಕಸ ಉತ್ಪಾದಿಸುವವರ ಜವಾಬ್ದಾರಿಯಾಗಿದೆ. ವಿಂಗಡಿಸದ ಕಸವನ್ನು ತೆಗೆದುಕೊಳ್ಳದೇ, ವಿಂಗಡಿಸಿ ನೀಡುವಂತೆ ಬಿಟ್ಟು ಹೋಗುತ್ತಾರೆ. ವಾಹನದೆದುರೇ ನಮ್ಮ ಕೈನಿಂದ ವಿಂಗಡಿಸುವಂತೆ ಮಾಡುತ್ತಾರೆ. ವಿಂಗಡಣೆ ಮಾಡದೇ ಹೊರಗೆ ಎಸೆಯುವುದು ಕಂಡುಬಂದರೆ ಅದಕ್ಕೆ ಪಾಲಿಕೆ ಮಾರ್ಷಲ್ಗಳು ದಂಡ ವಿಧಿಸುತ್ತಾರೆ. ಹಾಗಾಗಿ ಎಲ್ಲರೂ ಅನಿವಾರ್ಯವಾಗಿ ಕಸ ವಿಂಗಡಣೆ ಮಾಡಿ ನೀಡುತ್ತಿದ್ದಾರೆ. ಕಸ ವಿಂಗಡಿಸುವುದು ನಮ್ಮ ಕರ್ತವ್ಯ ಎಂದು ನಿವಾಸಿ ಸಲೀಂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸೇನಾ ಸಿಬ್ಬಂದಿಯಿಂದ ಸಮಸ್ಯೆ
ಇಲ್ಲಿ ಬಿಎಸ್ಎಫ್, ಸಿಐಎಸ್ಎಫ್ ಯೋಧರ 500ಕ್ಕೂ ಹೆಚ್ಚು ಮನೆಗಳಿವೆ. ಅವರ ಮನೆಗಳಿಂದ ಕಸ ಸಂಗ್ರಹಣೆಯಲ್ಲಿ ಸ್ವಲ್ಪ ಗೊಂದಲವಾಗಿದೆ. ಆ ಮನೆಯವರು ರಸ್ತೆಯಲ್ಲಿ ಆಗಾಗ ಕಸ ಎಸೆಯುವುದನ್ನು ಪಾಲಿಕೆ ಸಿಬ್ಬಂದಿ ಮತ್ತು ಮಾರ್ಷಲ್ಗಳು ಗುರುತಿಸಿದ್ದಾರೆ. ಆದರೆ ಅವರಿಗೆ ವಾರ್ಡ್ನಲ್ಲಿ ಕೈಗೊಂಡಿರುವ ಸ್ವಚ್ಛತಾ ಕ್ರಮಗಳ ಬಗ್ಗೆ ಅರಿವಿಲ್ಲ. ಎಲ್ಲ ಕೇಂದ್ರ ರಕ್ಷಣಾ ಪಡೆಯ ಇಲಾಖೆಗಳ ಕಚೇರಿಗೆ ಭೇಟಿ ಮಾಡಿ ಇಲ್ಲಿ ವಾಸವಿರುವ ಯೋಧ ರಿಗೆ ಜಾಗೃತಿ ಮೂಡಿಸಲು ಸಭೆ ನಡೆಸಲಾಗುವುದು ಎಂದು ಸ್ಥಳೀಯ ಪಾಲಿಕೆ ಸದಸ್ಯ ಮುನೀಂದ್ರ ಕುಮಾರ್ ತಿಳಿಸಿದರು.
ಬೀದಿ ಸ್ವಚ್ಛ ಆಗುತ್ತಿಲ್ಲ
ಜಕ್ಕೂರು 7ನೇ ವಾರ್ಡ್ನಲ್ಲಿ ಕಸ ಸಂಗ್ರಹಣೆಯಲ್ಲಿ ಶೇ.70 ಸುಧಾರಣೆಯಾಗಿದೆ. ಆದರೆ, ರಸ್ತೆಯಲ್ಲಿ ಪ್ರತಿಯೊಂದು ಬೀದಿಗಳಲ್ಲಿ ಪೌರಕಾರ್ವಿುಕರು ಸ್ವಚ್ಛತೆ ಮಾಡುವುದು ಕಡಿಮೆಯಾಗಿದೆ. ಹಾಗಾಗಿ ಬೀದಿಯಲ್ಲಿ ಬೀಳುವ ಎಲೆಗಳು, ಪೇಪರ್ ಮತ್ತು ಕೆಲವು ಪ್ಲಾಸ್ಟಿಕ್ ತ್ಯಾಜ್ಯಗಳು ಹಾರಾಡುತ್ತಿವೆ. ಅವಕ್ಕೆ ಸ್ಥಳೀಯರು ಬೆಂಕಿ ಹಚ್ಚುತ್ತಿದ್ದು, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೌರಕಾರ್ವಿುಕರು ಸ್ವಚ್ಚತೆಯ ಜವಾಬ್ದಾರಿ ನಿರ್ವಹಿಸಬೇಕಿದೆ.
ಇಂದೋರ್ ಮಾದರಿ ಪ್ರಾಯೋಗಿಕ ಜಾರಿಯ ಅಂತಿಮ ವರದಿ ಇನ್ನೊಂದು ತಿಂಗಳಲ್ಲಿ ಬರುತ್ತದೆ. ಇಲ್ಲಿಯವರೆಗಿನ ಬೆಳವಣಿಗೆಯನ್ನು ಗಮನಿಸಿದರೆ ಉತ್ತಮ ಸ್ಪಂದನೆ ಸಿಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಂತಿಮ ಫಲಿತಾಂಶ ಆಧರಿಸಿ ಇನ್ನಿತರ ವಾರ್ಡ್ಗಳಿಗೆ ಅದನ್ನು ವಿಸ್ತರಿಸಲಾಗುವುದು. | ಡಿ. ರಂದೀಪ್ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ನಮ್ಮ ವಾರ್ಡ್ನಲ್ಲಿ ಇಂದೋರ್ ಮಾದರಿ ಅಳವಡಿಕೆ ಮಾಡಿದ್ದು, ವಾರ್ಡ್ ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದಲ್ಲಿ ಕನಿಷ್ಠ 2 ಬಾರಿ ನಾನು ರಾತ್ರಿ ವೇಳೆ ಕಸ ಸಂಗ್ರಹಿಸುವುದನ್ನು ಖುದ್ದಾಗಿ ತಪಾಸಣೆ ಮಾಡುತ್ತೇನೆ. ಶೇ.100 ತ್ಯಾಜ್ಯ ವಿಂಗಡಣೆ, ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. | ಮುನೀಂದ್ರ ಕುಮಾರ್ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ತಿಂಗಳ ಹಿಂದೆ ಕಸ ಸಂಗ್ರಹಿಸುವ ವಾಹನದ ಹಿಂದೆ ಇಬ್ಬರು ಬರುತ್ತಿದ್ದರು. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಡಲು ತಿಳಿಸಿದರು. ಒಂದೇ ವಾರದಲ್ಲಿ ಎಲ್ಲವೂ ಬದಲಾಯಿತು. ವಿಂಗಡಿಸದಿದ್ದರೆ ನಮ್ಮ ಮುಂದೆಯೇ ಒಂದು ಪಾತ್ರೆಯಿಟ್ಟು ನಮ್ಮಿಂದಲೇ ಕಸ ವಿಂಗಡಣೆ ಮಾಡಿಸುತ್ತಿದ್ದರು. | ಅಮ್ಮಯ್ಯಮ್ಮ ಈಗ ಕಸ ವಿಂಗಡಿಸಿ, 2 ಡಬ್ಬಿ ಗಳಲ್ಲಿ ಹಾಕುತ್ತಿದ್ದೇವೆ. ಮೊದಲು ಕಷ್ಟವಾಯಿತು. ಈಗ ಅಭ್ಯಾಸ ವಾಗಿದೆ. | ಅಶ್ವತ್ಥಮ್ಮ ತಿಂಗಳಿಂದ ಬೆಳಗ್ಗೆ ಮತ್ತು ರಾತ್ರಿ ಕಸ ಸಂಗ್ರಹಿಸ ಲಾಗುತ್ತಿದೆ. ಮೊದಲು ಕಸ ಎಲ್ಲಿ ಹಾಕಬೇಕೆಂದು ತಿಳಿಯದೇ ಕಿಲೋಮೀಟರ್ಗಟ್ಟಲೆ ದೂರ ಹೋಗಬೇಕಿತ್ತು. ಈಗ ಕಸವನ್ನು ವಿಂಗಡಿಸಿ ವಾಹನಕ್ಕೆ ಕೊಡುತ್ತೇವೆ. | ಎ.ಕೆ. ಜೋಜಿ
ಸತೀಶ್ ಕೆ.ಬಳ್ಳಾರಿ