ಇಂಡೋ-ಯುಕೆ: 48 ಬಿಲಿಯನ್ ಪೌಂಡ್ಸ್ ವ್ಯವಹಾರ

ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್
ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್
Published on

ಪ್ರಮುಖ ಮುಖ್ಯಾಂಶಗಳು

  • ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭ
  • ಉಡುಪಿ-ದ.ಕ. ಜಿಲ್ಲೆಯ ಉದ್ಯಮಕ್ಕೂ ಭಾರಿ ಪ್ರಯೋಜನ
ಮಂಗಳೂರು: ಭಾರತ-ಯುನೈಟೆಡ್ ಕಿಂಗ್‌ಡಮ್ (ಯುಕೆ) ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದಿಂದಾಗಿ ದೇಶದ ಆಮದು ಮತ್ತು ರಫ್ತು 43 ಬಿಲಿಯನ್ ಪೌಂಡ್ಸ್‌ನಿಂದ 48 ಬಿಲಿಯನ್ ಪೌಂಡ್ಸ್‌ಗೆ ಏರಿಕೆಯಾಗಿದೆ ಎಂದು ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಹೇಳಿದರು.
ಶುಕ್ರವಾರ ನಗರದ ವಿವಾಂತ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
"ಕಳೆದ ಜು. 15ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕೆ ಪ್ರಧಾನಿಯವರು ಲಂಡನ್‌ನಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಓಪನ್ ಟ್ರೇಡ್ ಡೀಲ್) ಸಹಿ ಹಾಕಿದ್ದರು. ಅನಂತರದಲ್ಲಿ ಆಮದು ಮತ್ತು ರಫ್ತು ವ್ಯವಹಾರದಲ್ಲಿ 5 ಬಿಲಿಯನ್ ಪೌಂಡ್ಸ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ 75 ಬಿಲಿಯನ್ ಪೌಂಡ್ಸ್‌ಗೆ ಏರಿಕೆಯಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೊಡುಗೆ ಸಾಕಷ್ಟಿದೆ. ಇದಕ್ಕಾಗಿ ತಳಮಟ್ಟದಿಂದ ರೈತರು, ಉದ್ಯಮಿಗಳಿಗೆ ಈ ಬಗ್ಗೆ ಸಮಗ್ರ ಮಾಹಿತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ಭೇಟಿ ನೀಡಿ ಸಂಬಂಧಪಟ್ಟವರು, ಅಧಿಕಾರಿಗಳ ಜೊತೆ ಹಲವು ಸಭೆಗಳನ್ನು ಮಾಡುತ್ತಿದ್ದೇನೆ" ಎಂದರು.

ಯುಕೆ‌ಯಿಂದ ಭಾರತದಲ್ಲಿ ಹೂಡಿಕೆ

ಭಾರತದ ಕೌಶಲ, ತಂತ್ರಜ್ಞಾನ ಇನ್ನಷ್ಟು ಪ್ರಬಲವಾಗಲಿದೆ. ಡಿಜಿಟಲ್ ಟ್ರೇಡ್, ಫಿನ್‌ಟೆಕ್, ಹಸಿರು ಶಕ್ತಿ, ಮೂಲಸೌಕರ್ಯ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಯುಕೆ‌ಯಿಂದ ಭಾರತಕ್ಕೆ ಹೂಡಿಕೆ ಹೆಚ್ಚಾಗಲಿದೆ. ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಯುಕೆ‌ಯ ವಿವಿಧಯವರು ಕರ್ನಾಟಕದಲ್ಲೂ ಶಾಲೆಗಳನ್ನು ತೆರೆಯಲಿದ್ದಾರೆ. ಮುಖ್ಯವಾಗಿ ಯುಕೆ ಉದ್ಯಮಿಗಳು ಹೂಡಿಕೆ ಮಾಡಲು ಎಲ್ಲಾ ಆಯಾಮಗಳಲ್ಲೂ ಕರ್ನಾಟಕ ಪ್ರಸಕ್ತವಾಗಿದೆ. ಹಾಗಾಗಿ ಇಲ್ಲಿನ ಮುಖ್ಯಮಂತ್ರಿಗಳು, ಸಚಿವ ಎಂ.ಬಿ. ಪಾಟೀಲ್ ಜೊತೆಯೂ ಮಾತುಕತೆ ನಡೆಸಿದ್ದೇನೆ. ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಅಯ್ಯರ್ ಹೇಳಿದರು.

ಮಣಿಪಾಲ ಮಾಹೆ ಜೊತೆಯೂ ಮಾತುಕತೆ

ಆರೋಗ್ಯ ಕ್ಷೇತ್ರದಲ್ಲೂ ಗುಣಮಟ್ಟದ ಸೇವೆಗಾಗಿ ಮಣಿಪಾಲ ಮಾಹೆ ಜೊತೆ ಮಾತುಕತೆ ನಡೆಸಲಾಗಿದ್ದು, 25 ಸ್ಟಾರ್ಟ್ ಅಪ್‌ಗಳನ್ನು ಗುರುತಿಸಲಾಗಿತ್ತು. ಅವರಲ್ಲಿ 6 ಸ್ಟಾರ್ಟ್ ಅಪ್‌ಗಳನ್ನು ಆಯ್ಕೆ ಮಾಡಿದ್ದೇವೆ. ಅವರು ಯುಕೆ‌ಗೆ ತೆರಳಿ ಆರೋಗ್ಯ ಕ್ಷೇತ್ರದಲ್ಲಿ ಭಾರತಕ್ಕೇನು ಬೇಕು? ಯುಕೆ‌ಗೇನು ಬೇಕು? ಎನ್ನುವ ಬಗ್ಗೆ ಅಧ್ಯಯನ ನಡೆಸಿ ಬರಲಿದ್ದಾರೆ. ಅವರ ಸಂಪೂರ್ಣ ವೆಚ್ಚವನ್ನು ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ್ ಭರಿಸಲಿದೆ. ಅನಂತರ ಅನುಷ್ಠಾನದ ಬಗ್ಗೆ ಯೋಜನೆ ರೂಪಿಸಲಾಗುವುದು. ಮುಖ್ಯವಾಗಿ ಅಲ್ಲಿನ ತಂತ್ರಜ್ಞಾನ, ವಿದ್ಯಾರ್ಥಿಗಳು, ತಜ್ಞರು, ಪ್ರೊಫೆಸರ್‌ಗಳ ವಿನಿಮಯ ಕಾರ್ಯ ನಡೆಯಲಿದೆ. ಇದರಿಂದ ಅಲ್ಲಿನವರಿಗೂ, ಇಲ್ಲಿನವರಿಗೂ ಬಹಳ ಪ್ರಯೋಜನವಾಗಲಿದೆ ಎಂದರು.

ಸರಕುಗಳ ಮೇಲಿದ್ದ ರಫ್ತು ಸುಂಕ ರದ್ದು

ಈ ಒಪ್ಪಂದದಿಂದ ಭಾರತದಿಂದ ಯುಕೆ‌ಗೆ ರಫ್ತಾಗುವ ಸರಕುಗಳ ಮೇಲಿದ್ದ ಭಾರಿ ಸುಂಕವನ್ನು ಯುಕೆ ರದ್ದು ಮಾಡಿದೆ. ಹಾಗಾಗಿ ಭಾರತದಿಂದ ರಫ್ತಾಗುವ ಶೇ. 99 ಉತ್ಪನ್ನಗಳಿಗೆ ಹಾಗೆಯೇ ಯುಕೆ‌ಯಿಂದ ಭಾರತಕ್ಕೆ ಆಮದಾಗುವ ಶೇ. 90 ಉತ್ಪನ್ನಗಳ ಮೇಲೆ ಯಾವುದೇ ಸುಂಕವಿರುವುದಿಲ್ಲ. ಭಾರತ ಕೂಡ ಬ್ರಿಟನ್‌ನಿಂದ ಬರುವ ಕಾರುಗಳು, ವಿಸ್ಕಿ, ತಾಂತ್ರಿಕ ಉಪಕರಣಗಳ ಮೇಲಿನ ಸುಂಕವನ್ನು ಹಂತ-ಹಂತವಾಗಿ ಕಡಿಮೆ ಮಾಡಲು ಒಪ್ಪಿಕೊಂಡಿದೆ. ಇದರಿಂದ ಭಾರತ-ಯುಕೆ ಬಾಂಧವ್ಯವೂ ಹೆಚ್ಚಾಗಲಿದೆ.

ದ.ಕ.-ಉಡುಪಿ ಜಿಲ್ಲೆಗೇನು ಲಾಭ?

ಸುಂಕ ಕಡಿತದಿಂದಾಗಿ ಕರ್ನಾಟಕದ ಪ್ರಮುಖ ಉತ್ಪನ್ನಗಳಾದ ಟೆಕ್ಸ್‌ಟೈಲ್, ಬ್ಯಾಡಗಿ, ಕರಿಮೆಣಸು, ಡೈರಿ ಉತ್ಪನ್ನ, ರೇಷ್ಮೆ, ಕರಕುಶಲ ವಸ್ತು, ಮೈಸೂರು ಸಿಲ್ಕ್ಸ್, ಗೊಂಬೆ, ಕಾಫಿ, ಏಲಕ್ಕಿ ಮೊದಲಾದ ಉದ್ದಿಮೆದಾರರಿಗೆ ಪ್ರಯೋಜನ ಸಿಕ್ಕರೆ, ಕರಾವಳಿಯ ಉಭಯ ಜಿಲ್ಲೆಯ ಮುಖ್ಯವಾಗಿ ಅಡಿಕೆ, ಮೀನು, ಗೇರುಹಣ್ಣು, ಮಾವು ಮೊದಲಾದವುಗಳ ರಫ್ತು ಹೆಚ್ಚಾಗಲಿದೆ. ಇದರಿಂದ ಇಲ್ಲಿನ ಉದ್ದಿಮೆದಾರರು, ಬೆಳೆಗಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಬಂದರು, ವಿಮಾನ ನಿಲ್ದಾಣ ಮೂಲಸೌಕರ್ಯವಿರುವ ಕಾರಣ ರಫ್ತು ಪ್ರಮಾಣ ಏರಲಿದೆ. ಕರಾವಳಿ ಪ್ರವಾಸೋದ್ಯಮ ಕ್ಷೇತ್ರವೂ ಬೆಳೆಯಲಿದೆ.ಎಂದರು.

"ನಾಲ್ಕು ವರ್ಷಗಳ ಹಿಂದೆ ಭಾರತ-ಯುಕೆ ಮಧ್ಯೆ ವಾರಕ್ಕೆ ಕೇವಲ 7 ವಿಮಾನಗಳ ಹಾರಾಟವಿತ್ತು. ಈಗ 34 ವಿಮಾನಗಳು ಹಾರಾಟ ನಡೆಸುತ್ತಿವೆ. ಇಲ್ಲಿನ ಹೋಟೆಲ್, ಐಸ್‌ಕ್ರೀಮ್, ಗೇರುಹಣ್ಣು ಮೊದಲಾದ ಉದ್ದಿಮೆದಾರರು ಸುಲಭವಾಗಿ ಯುಕೆಯಲ್ಲಿ ಔಟ್‌ಲೆಟ್‌ಗಳನ್ನು ತೆರೆಯಬಹುದಾಗಿದೆ."

— ಚಂದ್ರು ಅಯ್ಯರ್, ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net