

ಉಡುಪಿ: ಧರ್ಮಾಧಾರಿತ ರಾಜಕೀಯ ಮಾಡಿದವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದಿರಾ ತತ್ವ ಸಿದ್ಧಾಂತ ಬಡವರಿಗೆ ತಿಳಿಸುವ ಕೆಲಸ ಮಾಡಬೇಕು. ಪಕ್ಷದ ಬೇರು ಗಟ್ಟಿಗೊಳಿಸುವನ ಕಾರ್ಯ ನಡೆಯಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಬೇಕು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಇಂದಿರಾ ಗಾಂಧಿ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡದಿದ್ದರೆ ಬಡವರಿಗೆ ಬ್ಯಾಂಕಿಂಗ್ ಸೇವೆ ಸಿಗುತ್ತಿರಲಿಲ್ಲ. ಭೂ ಸುಧಾರಣಾ ಕಾಯ್ದೆಯಿಂದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಯಿತು. ದೇಶದಲ್ಲಿ ಆಂತರಿಕ ಪ್ರಜಾಪ್ರಭುತ್ವ ಹಾಳಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಗುರಿ. ಜಾತಿ ಭೇದವಿಲ್ಲದೆ ಎಲ್ಲಾ ಬಡವರಿಗೆ ಸೌಲಭ್ಯ ಕೊಡುತ್ತಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನಕರ ಹೇರೂರು, ಕಿರರ್ಣ ಹೆಗ್ಡೆ, ನರಸಿಂಹಮೂರ್ತಿ, ಮಹಾಬಲ ಕುಂದರ್, ಸರಸು ಬಂಗೇರ ಉಪಸ್ಥಿತರಿದ್ದರು.