

ಅರಕಲಗೂಡು: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ೨೦ ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ ವಸತಿ ಶಾಲೆ ಸಂಕಿರಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಾಸಕ ಎ.ಟಿ. ರಾಮಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಕಳೆದ ಎರಡು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ವಸತಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ವಿಪರೀತವಾಗಿತ್ತು. ವಸತಿ ಶಾಲೆಗಳ ಸುದುದ್ದೇಶ ಸಾರ್ಥಕವಾಗಿಸಲು ಸರ್ಕಾರದ ಮೇಲೆ ನಿರತಂತ ಒತ್ತಡ ತಂದು ಕ್ಷೇತ್ರದಲ್ಲಿ ನಾಲ್ಕು ವಸತಿ ಶಾಲೆಗಳಿಗೆ ತಲಾ ೨೦ ಕೋಟಿ ರೂ ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಿಸಿದ್ದೇನೆ.
ಮಕ್ಕಳನ್ನು ಆಸ್ತಿವಂತರನ್ನಾಗಿಸುವ ಸಲುವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಮಕ್ಕಳ ಭವಿಷ್ಯ ಸುಂದರವಾಗಿ ನಿರ್ಮಾಣವಾಗಲು ಗುಣಮಟ್ಟ ಕಟ್ಟಡಗಳು ತಲೆಎತ್ತಬೇಕು, ಇಂಜಿನಿಯರ್ ಮತ್ತು ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಅಭಿವೃದ್ಧಿಯೇ ಮಾತಾಗಬೇಕು ಎನ್ನುವ ತತ್ವ ಪಾಲನೆ ಮಾಡಿ ಕ್ಷೇತ್ರದ ಪ್ರಗತಿಗೆ ಹೆಚ್ಚು ಅನುದಾನ ತರಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ೩೦೦ ಕೋಟಿ ರೂ, ನೀರಾವರಿ ಇಲಾಖೆಗೆ ಬರೊಬ್ಬರಿ ೧ ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡಿಸಿರುವೆ. ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಜನತೆ ಹಳ್ಳಿಗಳಲ್ಲಿ ಶಾಲೆಗಳನ್ನು ದತ್ತು ಪಡೆದು ಗಿಡ ನೆಟ್ಟು ಪರಿಸರ ಬೆಳೆಸಲು ಸತ್ಕಾರ್ಯ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಪಂ ಇಒ ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಶೋಭಾ ಮಹಾದೇವು, ಉಪಧ್ಯಕ್ಷ ಗೋವಿಂದರಾಜು, ಸದಸ್ಯೆ ಸವಿತಾ, ತಾಪಂ ಸದಸ್ಯರಾದ ನಿಂಗೇಗೌಡ, ಇಮ್ರಾನ್, ಕೃಷ್ಣೇಗೌಡ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ, ವಾಯುಪುತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ್, ತಾಪಂ ಮಾಜಿ ಅಧ್ಯಕ್ಷ ಸಂತೋಷ್ ಗೌಡ ಮುಂತಾದವರು ಉಪಸ್ಥಿತರಿದ್ದರು..