ಮೈಸೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ.ಅಕ್ಕಿ ಬದಲಿಗೆ ಇಂದಿರಾ ಪೌಷ್ಟಿಕ ಆಹಾರ ಕಿಟ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸಿದೆ.
ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿರುವ 10 ಕೆ.ಜಿ. ಅಕ್ಕಿಯಲ್ಲಿ 5 ಅಕ್ಕಿ ನೀಡಿ, ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ತೊಗರಿ ಬೇಳೆ, ಹೆಸರು ಬೇಳೆ, ಅಡುಗೆ ಎಣ್ಣೆ ಮುಂತಾದ ಅಗತ್ಯ ಆಹಾರ ವಸ್ತುಗಳನ್ನು ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ನೀಡಲು ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮದಿಂದ ಅನುಕೂಲವಾಗಲಿದೆ ಎಂದು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಡಿತರ ವ್ಯವಸ್ಥೆಗೆ ಬೇಕಾದ ಆಹಾರ ಉತ್ಪನ್ನಗಳನ್ನು ಟೆಂಡರ್ ಮೂಲಕ ಖಾಸಗಿ ಏಜೆನ್ಸಿಗಳಿಂದ ಕೊಳ್ಳುವ ಬದಲು ರೈತರಿಂದಲೇ ಎಂಎಸ್‌ಪಿ ದರದಲ್ಲಿ ನೇರವಾಗಿ ಕೊಂಡುಕೊಳ್ಳಬೇಕು. ರೈತರಿಂದಲೇ ನೇರವಾಗಿ ಧಾನ್ಯ ಕೊಳ್ಳುವ ಮೂಲಕ ಸರ್ಕಾರ ಕ್ರಾಂತಿಕಾರಿ ಮಾದರಿ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
5 ಕೆ.ಜಿ. ಹೆಚ್ಚುವರಿ ಅಕ್ಕಿ ಪೂರೈಸಲು ಕೊರತೆ ಇರುವುದರಿಂದ ಅಕ್ಕಿ ಬದಲು ಕುಟುಂಬದ ಸದಸ್ಯರಿಗೆ ನೇರ ನಗದು ವರ್ಗಾವಣೆಯ ಬದಲು ಪ್ರತಿ ಕುಟುಂಬಕ್ಕೆ ಕನಿಷ್ಠ 5 ಕೆ.ಜಿ ರಾಗಿ ಅಥವಾ ಜೋಳ, 1 ಕೆ.ಜಿ. ಬೇಳೆ, ಅಡುಗೆ ಎಣ್ಣೆ ಇತರೆ ಆಹಾರೋತ್ಪನ್ನಗಳನ್ನು ನೀಡುವಂತೆ 2023ನೇ ಸೆ.27ರಂದು ಕರ್ನಾಟಕ ರಾಜ್ಯ ರೈತ ಸಂಘ, ರೈತ ಸ್ವರಾಜ್ ವೇದಿಕೆ, ಮಹಿಳಾ ರೈತರ ಹಕ್ಕುಗಳ ವೇದಿಕೆ, ಜಾಗೃತ ಕರ್ನಾಟಕ ಪದಾಧಿಕಾರಿಗಳು ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೃಷಿ ಸಚಿವರ ಮೂಲಕ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿತ್ತು. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿತ್ತು ಎಂದರು. ಈ ವರದಿಯನ್ನು ಜಾರಿಗೆ ತಂದರೆ ಸರ್ಕಾರಕ್ಕೆ ಹಣಕಾಸಿನ ಉಳಿತಾಯ ವಾಗಲಿದೆ. ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಪೂರಕವಾಗುವ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಸರ್ಕಾರ ವರದಿಯ ಕೆಲವು ಅಂಶಗಳನ್ನು ಜಾರಿಗೆ ತಂದಿದೆಯಾದರೂ ರೈತರಿಂದಲೇ ಉತ್ಪನ್ನವನ್ನು ಕೊಳ್ಳಲು ತೀರ್ಮಾನಿಸದೆ ಇರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಪಡಿತರ ವ್ಯವಸ್ಥೆಗೆ ಬೇಳೆ ಕಾಳುಗಳು, ಎಣ್ಣೆ ಬೀಜಗಳು ಹಾಗೂ ಸಿರಿಧಾನ್ಯಗಳನ್ನು ಸ್ಥಳೀಯ ಖರೀದಿ ಮತ್ತು ವಿತರಣ ಮಾದರಿ ಸ್ಥಾಪಿಸುವ ಮೂಲಕ ಸರ್ಕಾರ ರಾಜ್ಯದಲ್ಲಿ ಉದ್ಯೋಗ ಮತ್ತು ಉದ್ಯಮದ ಅಪಾರ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ ಎಂದರು.
ಸ್ಥಳೀಯ ಎಣ್ಣೆ ಸಂಸ್ಕರಣಾ ಘಟಕಗಳು ಮತ್ತು ಕಾಳು ಸಂಸ್ಕರಣಾ ಘಟಕಗಳು, ರೈತರ ಉತ್ಪಾದಕ ಸಂಸ್ಥೆಗಳು ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಖರೀದಿ ಪ್ರಕ್ರಿಯೆ ನಡೆಸಿದರೆ ಆ ಸಂಸ್ಥೆಗಳಿಗೆ ಹೆಚ್ಚುವರಿ ಆದಾಯ ಅವಕಾಶ ದೊರೆಯುತ್ತದೆ. ಈ ಮೂಲಕ ಗ್ರಾಮೀಣ ಆರ್ಥಿಕ ಚಟುವಟಿಕೆ ಪುನಶ್ಚೇತನಕ್ಕೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಜ್ಯದಲ್ಲಿ ಬೆಳೆಯಲಾಗುವ 7 ಬೆಳೆಗಳನ್ನು ನೇರವಾಗಿ ರೈತರಿಂದ ಕೊಳ್ಳುವುದರ ಮೂಲಕ ರೈತರಿಗೆ ಬೆಲೆ ಸ್ಥಿರತೆ ಒದಗಿಸಬಹುದಾಗಿದೆ. ಇಂತಹ ಕ್ರಮಗಳಿಂದ ರಾಜ್ಯ ದೇಶದಲ್ಲೇ ಮಾದರಿ ಆಗಬಹುದಾದ ಅವಕಾಶಗಳು ಇವೆ. ಈ ಕಾರಣ ಸರಕಾರ ಪಡಿತರ ವ್ಯವಸ್ಥೆಗೆ ಈ ಮಾನದಂಡಗಳನ್ನು ಅನುಸರಿಸಬೇಕೆಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಹೊಸೂರು ಕುಮಾರ್, ನಾಗನಹಳ್ಳಿ ಚಂದ್ರಶೇಖರ್, ಕವಿತಾ ಕುರುಗಂಟಿ, ಆನಂದೂರು ಪ್ರಭಾಕರ್, ಮಂಡಕಳ್ಳಿ ಪ್ರಭಾಕರ್ ಇತರರು ಇದ್ದರು.