15ಕ್ಕೆ ಇಂದಿರಾ ಆಸ್ಪತ್ರೆಗೆ 25 ವರ್ಷದ ಸಂಭ್ರಮ; ವೈದ್ಯರು, ಸಿಬ್ಬಂದಿಗೆ ಗೌರವಾರ್ಪಣೆ, ರಕ್ತದಾನ ಶಿಬಿರ

IMG-20240812-WA0195
Published on

ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಛಾಪನ್ನು ಮೂಡಿಸಿದ ಇಂದಿರಾ ಆಸ್ಪತ್ರೆ ತನ್ನ 25ನೇ ವಾರ್ಷಿಕೋತ್ಸವವನ್ನು ಆ.15ರಂದು ಸಂಜೆ 5ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಚರಿಸಿಕೊಳ್ಳುತ್ತಿದೆ.
 ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಯೇನೆಪೊಯ ವಿಶ್ವವಿದ್ಯಾಲಯದ ಗೌರವ ಕುಲಪತಿ ಡಾ.ಅಬ್ದುಲ್ಲಾ ಕುಂಞಿ, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ನೋಂದಣಾಧಿಕಾರಿ ಡಾ.ರಿಯಾಜ್ ಬಾಷಾ ಮುಖ್ಯ ಅತಿಥಿಗಳಾಗಿ  ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಸೈಯ್ಯದ್ ನಿಜಾಮುದ್ದೀನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದಿರಾ ಆಸ್ಪತ್ರೆ ತನ್ನ ಗೌರವಾನ್ವಿತ ವೈದ್ಯರು ಮತ್ತು ಸಿಬ್ಬಂದಿಯ ಕೊಡುಗೆಗಳನ್ನು ಗೌರವಿಸಲು ವಾರ್ಷಿಕೋತ್ಸವ ಸಂಭ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಸಂದರ್ಭ ಸಮುದಾಯದ ಆರೋಗ್ಯವನ್ನು ಬೆಂಬಲಿಸಲು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
25ನೇ ವರ್ಷದ ಸಂಭ್ರಮವು ರೋಗಿಗಳ ಆರೈಕೆಗೆ ಬದ್ಧತೆಯಿಂದ ಗುರುತಿಸಲ್ಪಟ್ಟ ಬೆಳವಣಿಗೆ ಮತ್ತು ನಾವೀನ್ಯತೆಯ ಪ್ರಯಾಣವನ್ನು ಪ್ರತಿಬಿಂಬಿಸಲಿದೆ. ಆಸ್ಪತ್ರೆ ತನ್ನ ಯಶಸ್ಸಿಗೆ ಕಾರಣರಾದ ನಿಷ್ಟಾವಂತ ಸಿಬ್ಬಂದಿ, ಬೆಂಬಲಿತ ಸಮುದಾಯ ಮತ್ತು ಆರೋಗ್ಯ ಸೇವಾ ಪಾಲುದಾರರಿಗೆ ತನ್ನ ಕೃತಜ್ಞತೆ ವ್ಯಕ್ತಪಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂದಿರಾ ಆಸ್ಪತ್ರೆ ಸಮುದಾಯಕ್ಕೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರಿಸಲಿದೆ ಎಂದು ಹೇಳಿದರು.
ವಕೀಲ ಸಯ್ಯದ್ ಝೊರಾನುದ್ದೀನ್, ಪಿಆರ್‌ಒ ಅಶ್ರಫ್ ಬಾವ ಸುದ್ದಿಗೋಷ್ಠಿಯಲ್ಲಿದ್ದರು.

-------
ಅತ್ಯಾಧುನಿಕ ವೈದ್ಯಕೀಯ ಕೇಂದ್ರ
1999ರಲ್ಲಿ ಆಸ್ಪತ್ರೆ ಸ್ಥಾಪನೆಯಾದಾಗಿನಿಂದ ಅತ್ಯುತ್ತಮ ವೈದ್ಯಕೀಯ ಆರೈಕೆ ನೀಡುವ ಮೂಲಕ ಸಮುದಾಯಕ್ಕೆ ಉನ್ನತ ಆರೋಗ್ಯ ಸೇವೆಯನ್ನು ನೀಡುವಲ್ಲಿ ನಿರತವಾಗಿದೆ. ಕಳೆದ ಕಾಲು ಶತಮಾನದಲ್ಲಿ ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ. ಜತೆಗೆ ಇಂದಿರಾ ಎಜುಕೇಶನಲ್ ಟ್ರಸ್ಟ್-ನರ್ಸಿಂಗ್, ಅಲೈಡ್ ಆರೋಗ್ಯ ಮತ್ತು ಫಿಸಿಯೋಥೆರಪಿ ಕೋರ್ಸ್‌ಗಳನ್ನು ಒಳಗೊಂಡ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. ಉತ್ತಮ ಆರೋಗ್ಯ ವೃತ್ತಿಪರರನ್ನು ನಿರ್ಮಿಸುವಲ್ಲಿ ತನ್ನ ಬದ್ಧತೆಗೆ ಪ್ರಸಿದ್ಧವಾಗಿದೆ ಎಂದು ಡಾ.ಸೈಯ್ಯದ್ ನಿಜಾಮುದ್ದೀನ್ ವಿವರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net