ಮತಗಳ್ಳತನದಿಂದ ಚುನಾವಣೆ ಗೆದ್ದಿದ್ದ ಇಂದಿರಾ ಗಾಂಧಿ

mla Araga gnanendra
Published on

ಶಿವಮೊಗ್ಗ: ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಬಹಳ ಹಿಂದಿನಿಂದಲೂ ಇತಿಹಾಸ ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಮತಗಳ್ಳತನದಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು ಎಂಬುದನ್ನು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮರೆತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಚಾರಕ್ಕಾಗಿ ದೇಶಾದ್ಯಂತ ಮತಗಳ್ಳತನ ಆಗಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಹಿಂದೆ ರಾಯ್ ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಆಗ ಅಲಹಾಬಾದ್ ಹೈಕೋರ್ಟ್ ಅವರ ಸದಸ್ಯತ್ವ ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪು ಎತ್ತಿಹಿಡಿದಿತ್ತು. ಆದರೆ ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಯದೇ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದರು ಎಂದು ದೂರಿದರು.

ರಾಹುಲ್ ಗಾಂಧಿ ಲೋಕಸಭೆ ಪ್ರತಿಪಕ್ಷದ ನಾಯಕರಾಗಿ ಘನತೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಅವರಿಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ. ಚುನಾವಣೆಯಲ್ಲಿ ಮತಗಳ್ಳತನ ಆಗಿದ್ದರೆ ಅದನ್ನು ಆಕ್ಷೇಪಿಸಲು ತಕ್ಷಣವೇ ಅವಕಾಶವಿತ್ತು. ಚುನಾವಣಾ ಆಯೋಗವು ಬಿಎಲ್ಎ ನೇಮಕಕ್ಕೂ ಅವಕಾಶ ನೀಡಿತ್ತು. ಚುನಾವಣೆ ಮುಗಿದ ಮೂರು ತಿಂಗಳವರೆಗೂ ತಕರಾರು ಸಲ್ಲಿಸಲು ಅವಕಾಶವಿದ್ದರೂ ಮಾಡಲಿಲ್ಲ. ಆದ್ದರಿಂದ ಅವರ ಆರೋಪಗಳು ನಂಬಿಕೆಗೆ ಅರ್ಹವಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ರಾಹುಲ್ ಗಾಂಧಿ ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ವಿರುದ್ಧದ ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಸರ್ಕಾರವನ್ನೇ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net