ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿಯರ ಪ್ರತಿಭಟನೆ

04 KRN-7
Published on

ಕೆ.ಆರ್.ನಗರ: ಪ್ರಾಂಶುಪಾಲರ ವರ್ಗಾವಣೆಗೆ ಆಗ್ರಹಿಸಿ ತಾಲೂಕಿನ ಹಂಪಾಪುರ ಗ್ರಾಮದ ಇಂದಿರಾ ಗಾಂಧಿ ವಸತಿ ನಿಲಯದಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನಿಲಯಕ್ಕೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ವಿದ್ಯಾರ್ಥಿಗಳ ದೂರು ಆಲಿಸಿದರು.


ವಿದ್ಯಾರ್ಥಿನಿಯರಿಗೆ ಮನಬಂದಂತೆ ಥಳಿಸುವ ಮೂಲಕ ಹಾಸ್ಟೆಲ್‌ನಲ್ಲಿ ಭಯ ಹುಟ್ಟಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯರು ಬುಧವಾರ ಮಧ್ಯಾಹ್ನದಿಂದ ಊಟ ಮಾಡದೆ ವಸತಿ ನಿಲಯದ ಎದುರು ಪ್ರತಿಭಟನೆ ಆರಂಭಿಸಿದರು. ವಿಷಯ ತಿಳಿದ ಪಾಲಕರು ನಿಲಯದ ಬಳಿ ಜಮಾವಣೆಗೊಂಡರು. ಅಲ್ಲದೆ, ಮೇಲಧಿಕಾರಿಗಳು ಸ್ಥಳಕ್ಕಾಗಮಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಹಾಸ್ಟೆಲ್ ಒಳಗೆ ಪ್ರವೇಶಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.


ಅ. 2ರ ಗಾಂಧಿ ಜಯಂತಿ ದಿನದಂದು ಹಾಸ್ಟೆಲ್‌ನಲ್ಲಿ ಜಯಂತಿ ಆಚರಿಸಿದ ಬಳಿಕ ಗಾಂಧೀಜಿ ಅವರ ಭಾವಚಿತ್ರಕ್ಕೆ ಹಾಕಲಾಗಿದ್ದ ಹೂವನ್ನು 7ನೇ ತರಗತಿ ವಿದ್ಯಾರ್ಥಿನಿ ತಲೆಗೆ ಮುಡಿದುಕೊಂಡಿದ್ದಳು. ಇದನ್ನು ತಿಳಿದ ಪ್ರಾಂಶುಪಾಲರು ಆಕೆಯನ್ನು ಮನಬಂದಂತೆ ಥಳಿಸಿ, ಕಪಾಳಕ್ಕೆ ಬಾರಿಸಿದ್ದರು. ಆ ಸಮಯದಲ್ಲಿ ಬಿಡಿಸಲು ಹೋದ ಇತರ ವಿದ್ಯಾರ್ಥಿಗಳನ್ನೂ ಥಳಿಸಿದ್ದರು ಎನ್ನಲಾಗಿದ್ದು, ವಿಷಯ ತಿಳಿದ 10ನೇ ತರಗತಿ ವಿದ್ಯಾರ್ಥಿನಿಯರು ಘಟನೆ ಖಂಡಿಸಿ ಬುಧವಾರ ಪ್ರತಿಭಟನೆಗೆ ಮುಂದಾದರು. ಅಲ್ಲದೆ, ಪ್ರಾಂಶುಪಾಲರನ್ನು ವರ್ಗಾಯಿಸುವಂತೆ ಪಟ್ಟು ಹಿಡಿದರು.


ಸ್ಥಳಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಬಿಸಿಎಂ ಅಧಿಕಾರಿ ಚಂದ್ರಕಲಾ, ಬಿಇಒ ಆರ್.ಕೃಷ್ಣಪ್ಪ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಕೆಗೆ ಮುಂದಾದರೂ ಪ್ರಯೋಜನವಾಗಲಿಲ್ಲ. ಕಡೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರಲ್ಲದೆ, ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net