ಇಂದಿರಾ ಗಾಂಧಿ ದೇಶ ಮುನ್ನಡೆಸಿದ್ದು ಒಂದು ಮೈಲಿಗಲ್ಲು : ಸಚಿವ ಎಸ್.ಬೋಸರಾಜ್

19 A
Published on

ಮೈಸೂರು: ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಭದ್ರತೆಗೆ ದೊಡ್ಡ ಸವಾಲುಗಳು ಇದ್ದ ಸಂದರ್ಭದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸಿದ ರೀತಿ ಒಂದು ದೊಡ್ಡ ಮೈಲಿಗಲ್ಲು ಎಂದು ಸಣ್ಣ ನೀರಾವರಿ ಸಚಿವ ಎಸ್.ಬೋಸರಾಜ್ ಹೇಳಿದರು.

ಮೈಸೂರು ನಗರ ಹಾಗೂ ಗ್ರಾವಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಡಿಗಾರ್ಡ್‌ಗಳಿಂದಲೇ ಹತ್ಯೆಯಾದ ಇಂದಿರಾಗಾಂಧಿ ಅವರು ದೇಶವನ್ನು ಮುನ್ನಡೆಸಿದ್ದು, ಒಂದು ದೊಡ್ಡ ಮೈಲಿಗಲ್ಲು. ಮಹಿಳಾ ರಾಜಕಾರಣಕ್ಕೆ ಮುನ್ನುಡಿ ಬರೆದರು. ಇಂತಹ ದಿಟ್ಟ ಉಕ್ಕಿನ ಮಹಿಳೆ ಹತ್ಯೆ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಕ ೃತಿ ಚಿಂತಕರಾದ ಡಾ.ಶೈಲಾ ಮಾತನಾಡಿ, ಭಾರತದ ಧೀಮಂತ ಮಹಿಳೆ ಇಂದಿರಾಗಾಂಧಿ ರಾಜಕೀಯ ಕುಟುಂಬದವರಾಗಿದ್ದರೂ ಅವರಿಗಿದ್ದ ಸವಾಲುಗಳು ಬೆಟ್ಟದಷ್ಟು. ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗಿ ದೇಶವನ್ನು ಬ್ರಿಟಿಷರಿಂದ ವಿಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರು ಕುಟುಂಬದ ಕುಡಿಯಾಗಿ ಜನಿಸಿದ ಭಾರತದ ದಿಕ್ಕನ್ನೇ ಬದಲಿಸಿದರು ಎಂದರು.

ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೀನ-ದಲಿತ, ದುರ್ಬಲ ವರ್ಗದ ಜನರಿಗೆ ಆಶಾಕಿರಣವಾಗಿ ಪ್ರಜ್ವಲಿಸಿದರು. ಭಾರತದ ಬಡವರನ್ನು ತನ್ನ ಬಡತನ ಎಂದು ಭಾವಿಸಿ, ಭಾರತದ ಸಮಸ್ಯೆಗಳನ್ನು ತನ್ನ ಸಮಸ್ಯೆ ಎಂದು ಭಾವಿಸಿದರು ಎಂದು ಬಣ್ಣಿಸಿದರು.

ಭೂಮಿ ಇರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಳುವವನೇ ಭೂಮಿ ಒಡೆಯ ಎನ್ನುವ ಕಾನೂನನ್ನು ಜಾರಿಗೆ ತಂದು ಭೂಮಿ ನೀಡಿದ ಹೆಗ್ಗಳಿಕೆ ಇಂದಿರಾ ಅವರಿಗೆ ಮಾತ್ರ ಸಲ್ಲುತ್ತದೆ ಎಂದರು.

ಭಾರತದ ಸಾಮಾಜಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಇಂದಿರಾಗಾಂಧಿ, ಹೆಣ್ಣು ಮಕ್ಕಳ ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಇಡಿ ಪ್ರಪಂಚವೇ ತಿರುಗಿ ನೋಡುವ ಹಾಗೆ ದೇಶವನ್ನು ಕಟ್ಟಿದರ ಫಲವಾಗಿ ಇಂದು ಸುಭದ್ರ ಭಾರತ ನಮ್ಮೊಂದಿಗಿದೆ ಎಂದರು.

ಸರೋಜಾ ತುಳಸಿ ದಾಸಪ್ಪ ಮಾತನಾಡಿ, ಇಂದಿರಾ ಗಾಂಧಿ ಮೈಸೂರಿಗೆ ಭೇಟಿ ಕೊಟ್ಟಾಗ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಆಗ ನಾನು ಇಂದಿರಾಗಾಂಧಿ ಜತೆ ಒಡನಾಟವನ್ನು ಹೊಂದಿದ್ದೆ ಎಂಬ ಐತಿಹಾಸಿಕ ಘಟನೆಗಳನ್ನು ಸ್ಮರಿಸಿದರು.

ತುಳಸಿ ದಾಸಪ್ಪ ಅವರನ್ನು ಇಂದಿರಾ ಗಾಂಧಿ ಅವರು ಪ್ರೀತಿಯಿಂದ ತುಳಸಿ ಎಂದು ಕರೆಯುತ್ತಿದ್ದರು. ಕಾಂಗ್ರೆಸ್ ಎರಡು ಭಾಗ ಆದಾಗ ಇಂದಿರಾಗಾಂಧಿಯನ್ನು ಮೈಸೂರಿಗೆ ಕರೆಸಿ ಯಶೋಧರ ದಾಸಪ್ಪ ಸಭೆ ಮಾಡಿಸಿದರು. ಆ ಸಭೆಯಲ್ಲಿ ಒಮ್ಮತ ಮೂಡದೆ ಎರಡು ಭಾಗವಾಯಿತು ಎಂದರು.

ಈಗ ಸಮಾಜದಲ್ಲಿ ಆರ್‌ಎಸ್‌ಎಸ್ ಸಮಾಜವನ್ನು ಒಡೆಯುವ ಮನೋಭಾವ ಸೃಷ್ಟಿ ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ನಿಜವಾಗಲೂ ಕೃತಜ್ಞರಾಗಬೇಕು. ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವ ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಇದಕ್ಕೆ ಎಲ್ಲರೂ ಒತ್ತಾಸೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್, ಮೈಸೂರು ಅರಗು ಮತ್ತುಬಣ್ಣದ ಕಾರ್ಖಾನೆ ಅಧ್ಯಕ್ಷ ಎಚ್.ಡಿ.ಗಣೇಶ್, ಮಾಜಿ ಮಹಾಪೌರರಾದ ಮೋದಮಣಿ, ಬಿ.ಕೆ.ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ಪದಾಧಿಕಾರಿಗಳಾದ ಈಶ್ವರ್ ಡಿ.ಚಕ್ಕಡಿ, ಶಿವಪ್ರಸಾದ್, ಸುನಂದ್‌ಕುಮಾರ್, ಭಾಸ್ಕರ್ ಎಲ್.ಗೌಡ, ಮಂಚೇಗೌಡನ ಕೊಪ್ಪಲು ರವಿ, ಎಸ್.ಸಿದ್ದಯ್ಯ, ಸಾ.ಮ.ಯೋಗೇಶ್, ರಾಹುಲ್ ಕುಂಬರಹಳ್ಳಿ, ಮಹೇಶ್, ಯೋಗೇಶ್, ಗಿರೀಶ್, ಭವ್ಯಾ, ಪುಷ್ಪವಲ್ಲಿ, ಎನ್.ಡಿ.ತಿವಾರಿ, ಸುಶೀಲಾ ನಂಜಪ್ಪ, ದಾಸನೂರು ಪುಟ್ಟಸ್ವಾಮಿ, ಗುರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net