ಇಂದಿರಾ ಗಾಂಧಿ ಎಲ್ಲಾ ಮಹಿಳೆಯರಿಗೆ ಮಾದರಿ

20adarshkdga2
Published on

ಮಡಿಕೇರಿ: ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಬದುಕು ದೇಶದ ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅಭಿಪ್ರಾಯಪಟ್ಟರು.


ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಇಂದಿರಾ ಗಾಂಧಿಯವರ ೧೦೬ ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಮೂಲಕ ಸಾರ್ವಜನಿಕ ಜೀವನ ಆರಂಭಿಸಿ ದೇಶದ ಪ್ರಧಾನಿಯಾಗಿ ಅಪ್ರತಿಮ ಸಾಧನೆ ಮಾಡಿ ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇಂದಿರಾ ಗಾಂಧಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.


ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕೊನೆಯ ಭಾಷಣದಲ್ಲಿ ನನ್ನ ದೇಹದಲ್ಲಿರುವ ಕೊನೆಯ ರಕ್ತದ ಹನಿ ಕೂಡ ದೇಶಕ್ಕಾಗಿ ಮೀಸಲಾಗಿದೆ ಎಂದು ನುಡಿದಿದ್ದರು. ಅದೇ ರೀತಿ ಅವರು ದೇಶಕ್ಕಾಗಿ ಹುತಾತ್ಮರಾದರು ಎಂದು ಬಣ್ಣಿಸಿದ ಅವರು, ಬದುಕುವ ಜನರಿಗೆ ಭೂಮಿಯ ಹಕ್ಕು ನೀಡಿದ ಇಂದಿರಾ ಜಗತ್ತಿನ ಸಮಾಜ ಸುಧಾರಕರ ಸಾಲಿಗೆ ಸೇರುತ್ತಾರೆ ಎಂದು ಹೇಳಿದರು.


ಮಡಿಕೇರಿ ನಗರ ಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ.ಅಯ್ಯಪ್ಪ ಮಾತನಾಡಿ, ಇಂದಿರಾ ಗಾಂಧಿಯವರ ದಿಟ್ಟತನದ ಆಡಳಿತದಿಂದ ಭಾರತ ಸುಭದ್ರವಾಯಿತು ಎಂದರು.


ನಗರ ಕಾಂಗ್ರೆಸ್ ಉಪಾಧ್ಯಕ್ಷ ಯಾಕುಬ್ ಮಾತನಾಡಿ, ಪೊಖ್ರಾನ್ ಅಣು ಪರೀಕ್ಷೆ ನಡೆಸುವ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರ ಎಂದು ಇಂದಿರಾ ಗಾಂಧಿ ಪ್ರಪಂಚಕ್ಕೆ ಪರಿಚಯಿಸಿದರು. ಇಂದಿರಾ ಜನ್ಮ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಹಂಚಲಾಯಿತು. ಕಚೇರಿಯಲ್ಲಿ ರಂಗೋಲಿ ಹಾಕಿ, ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.


ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಕಾಬಿ, ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್, ನಗರ ಮಹಿಳಾ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ, ಪ್ರಮುಖರಾದ ಮಮ್ತಾಜ್ ಬೇಗಂ, ಸದಾ ಡೆನ್ನಿಸ್, ಕಿಮ್ಮುಡಿರ ಸೋಮಣ್ಣ, ಪ್ರೇಮಾ ಕೃಷ್ಣಪ್ಪ ಪ್ರೇಮಾ ಲಿಂಗಪ್ಪ, ರಿಯಾಜ್, ಸೈಮನ್, ರಾಣಿ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಂಘಟಣಾ ಕಾರ್ಯದರ್ಶಿ ಮುನೀರ್ ಮಾಚರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net