

ಯಳಂದೂರು: ಮುಂದಿನ ಕೆಲವು ದಿನಗಳಲ್ಲಿ ಅನ್ನಭಾಗ್ಯದ ಯೋಜನೆಯಡಿ ಇಂದಿರಾ ಆಹಾರ ಕಿಟ್‌ಗಳನ್ನು ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಯೋಜನೆ ಜಾರಿಯಾದರೆ ಮತ್ತಷ್ಟು ಬಡವರ್ಗದ ಜನರಿಗೆ ಸಾಕಷ್ಟು ಉಪಯುಕ್ತವಾಗಲಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಎಸ್.ಪ್ರಭುಪ್ರಸಾದ್ ಮಾಹಿತಿ ನೀಡಿದರು.
ತಾಲೂಕಿನ ಮದ್ದೂರು ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಇಂದಿರಾ ಆಹಾರ ಕಿಟ್ ಅನ್ನು ಪ್ರತಿ ತಿಂಗಳು ನೀಡಲಿದ್ದು, ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮತಿ ಪಡೆದು ವಿತರಿಸುವ ಸಾಧ್ಯತೆ ಇದೆ. ಸದ್ಯ ಅಕ್ಕಿಯ ಪ್ರಮಾಣವು ತಿಂಗಳ ಬಳಕೆಯ ಅಗತ್ಯಕ್ಕಿಂತ ಹೆಚ್ಚು ಇದೆ. ಹೆಚ್ಚುವರಿ ಅಕ್ಕಿಯು ಕಡಿಮೆ ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣವು ಕಂಡು ಬರುತ್ತಿರುವುದರಿಂದ ಹೆಚ್ಚುವರಿ ಅಕ್ಕಿ ವಿತರಣೆ ಬದಲು ಪೌಷ್ಟಿಕಾಂಶಯುಕ್ತ ಅಗತ್ಯ ವಸ್ತುಗಳ ಕಿಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗೋಧಿ, ಸಕ್ಕರೆ, ಉಪ್ಪು, ತೊಗರಿಬೇಳೆ, ಅಡುಗೆಎಣ್ಣೆ, ಚಹಾ ಪುಡಿ ಹಾಗೂ ಕಾಫಿ ಪುಡಿ ನೀಡುವ ಸಾಧ್ಯತೆಯೂ ಯೋಜನೆಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳಾದ ಅನ್ನಭಾಗ್ಯ, ಶಕ್ತಿಯೋಜನೆ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಶೇ.100ರಷ್ಟು ಪ್ರಮಾಣದಲ್ಲಿ ತಲುಪಿಸುವ ನಿಟ್ಟಿನಲ್ಲಿ ಸಭೆ, ಸಮಾರಂಭಗಳನ್ನು ಮಾಡಿ ಜನರ ಜನಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಎಲ್ಲ ವರ್ಗದ ಬಡಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಕಾರ್ಯಕ್ರಮವನ್ನು ಶೇ.100ರಷ್ಟು ಪ್ರಗತಿ ಸಾಧಿಸಬೇಕು. ತಾಲೂಕಿನಲ್ಲಿ ಶೇ 98.8ರಷ್ಟು ಪ್ರಗತಿ ಹೊಂದಿದೆ. ಯುವ ನಿಧಿಯಲ್ಲಿ 316 ನೋಂದಣಿ ಮಾಡಲಾಗಿದೆ. ಆದರಲ್ಲಿ 293 ಜನರಿಗೆ ನೇರವಾಗಿ ಅನುದಾನ ವರ್ಗಾವಣೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಗಳ ತಾಲೂಕಿನಲ್ಲಿ ಎಲ್ಲರಿಗೆ ತಲುಪುವಂತೆ ಅಧಿಕಾರಿಗಳ ವರ್ಗವು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ತಾ.ಪಂ. ಕಾರ್ಯನಿವಾಹಕ ಅಧಿಕಾರಿ ಉಮೇಶ್, ಗ್ರಾ.ಪಂ. ಅಧ್ಯಕ್ಷೆ ರೂಪಾ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ನಾಗಣ್ಣ, ವಿರೂಪಾಕ್ಷ, ಮಂಜು, ಶಿವಣ್ಣ, ನಂಜುಂಡಸ್ವಾಮಿ, ಮಹೇಶ್, ಅಸ್ಲಂಪಾಷ, ವಿಶ್ವ, ಶಿವರಾಜ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಸಮಿತಿಯ ಸದಸ್ಯರಾದ ಮಲ್ಲಿಗೆಹಳ್ಳಿ ಸುರೇಶ್, ಮುಖಂಡರಾದ ಮದ್ದೂರು ಶ್ರೀಕಂಠ, ಮಲ್ಲಿಕಾರ್ಜುನಸ್ವಾಮಿ, ಪ್ರಸಾದ್, ಆಹಾರ ನಿರೀಕ್ಷಕ ಬಿಸಲಯ್ಯ, ಪಿಡಿಒ ನಟರಾಜು, ನೂರಾರು ಮಹಿಳೆಯರು ಇದ್ದರು.