

ಚಳ್ಳಕೆರೆ: ನಗರದ ಇಂದಿರಾ ಕ್ಯಾಂಟಿನ್ ನಿರ್ವಹಣೆಗೆ ಸಮರ್ಪಕ ಸಿಬ್ಬಂದಿ ಮತ್ತು ವೇತನ ವ್ಯವಸ್ಥೆ ಇಲ್ಲದೆ ಶುಕ್ರವಾರ ಬೀಗ ಹಾಕಿದ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಕ್ಯಾಂಟಿನ್ ನಿರ್ವಹಣೆಗೆ ನೀರಿನ ಸಮಸ್ಯೆಯಿಂದಾಗಿ ಬಾಗಿಲು ಮುಚ್ಚಲಾಗಿತ್ತು. ಆದರೆ ಸ್ಥಳೀಯ ನಗರಸಭಾ ಆಡಳಿತದಿಂದ ಅನುಕೂಲ ಕಲ್ಪಿಸಲಾಗಿತ್ತು. ಸಿಬ್ಬಂದಿ ಕೊರತೆ ಮತ್ತು ವೇತನ ಸಮಸ್ಯೆಯಿಂದಾಗಿ ಈಗ ಮತ್ತೆ ಕ್ಯಾಂಟಿನ್‌ಗೆ ಕಂಟಕ ಶುರುವಾಗಿದೆ.
ಸುಮಾರು ಎಂಟು-ಹತ್ತು ತಿಂಗಳಿನಿಂದ ಸಂಬಳ ಇಲ್ಲ. ಕ್ಯಾಂಟಿನ್ ಸೇವೆಗೆ ಮಂಜೂರಾತಿಯಾಗಿರುವ 7 ಹುದ್ದೆಗಳಲ್ಲಿ 5 ಹುದ್ದೆ ಖಾಲಿ ಉಳಿದಿವೆ. ದಿನದಲ್ಲಿ ತಿಂಡಿ ಮತ್ತು ಊಟಕ್ಕೆ 400ರಿಂದ 500 ಜನ ಬಂದು ಹೋಗುವ ಕ್ಯಾಂಟಿನ್‌ನಲ್ಲಿ ಕೇವಲ ಇಬ್ಬರು ಮಾತ್ರ ದುಡಿಯುತ್ತಿದ್ದೇವೆ. ಕುಡಿಯುವ ನೀರು ಮತ್ತು ಉತ್ತಮ ಗುಣಮಟ್ಟದ ಅಕ್ಕಿ ಬಳಕೆಗೆ ತೀವ್ರ ಸಮಸ್ಯೆ ಇದೆ ಎಂದು ಇದೇ ಸಂದರ್ಭದಲ್ಲಿ ಕ್ಯಾಂಟಿನ್ ನಿರ್ವಾಹಕ ಶ್ರೀಧರ್ ಪತ್ರಿಕೆಗೆ ಅಳಲು ತೋಡಿಕೊಂಡಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಆರಂಭಿಸಿದೆ. ಇದರಿಂದ ಕೂಲಿಕಾರ್ಮಿಕರಿಗೆ ಮತ್ತು ಗ್ರಾಮಾಂತರ ಭಾಗದಿಂದ ನಗರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಸಿಗುವಂತಾಗಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಇಂದಿರಾ ಕ್ಯಾಂಟಿನ್‌ಗಳಿಗೆ ಮೂಲ ಸೌಕರ್ಯ ಮತ್ತು ಸಿಬ್ಬಂದಿ, ವೇತನದ ವ್ಯವಸ್ಥೆ ಒದಗಿಸಲು ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರಿರುವ ತಾಲೂಕಿನಲ್ಲೇ ಕ್ಯಾಂಟಿನ್ ಮುಚ್ಚಿರುವುದು ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಎಂದು ರೈತ ಸಂಘಟನೆಯ ಬಾಲೇನಹಳ್ಳಿ ಒ. ತಿಪ್ಪೇಸ್ವಾಮಿ, ಆರ್. ಚಿದಾನಂದಪ್ಪ, ಉಳ್ಳಾರ್ತಿ ತಿಪ್ಪೇಸ್ವಾಮಿ ದೂರಿದ್ದಾರೆ.