ಸರ್ಕಾರಿ ಶಾಲೆ ಜಾಗದ ಮೇಲೆ ಕೆಂಗಣ್ಣು

232
Published on

ಟಿ.ಎಚ್.ಶಿವಕುಮಾರ್ ಮಲೇಬೆನ್ನೂರು
ಮಲೇಬೆನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬೇಕಾದಷ್ಟು ಖಾಲಿ ಜಾಗ ಇದೆ. ಆದರೆ, ಎಲ್ಲವನ್ನೂ ಬಿಟ್ಟು ಶತಮಾನ ಕಂಡ ಶಾಲಾ ಕೊಠಡಿಯನ್ನೇ ಧ್ವಂಸ ಮಾಡಿ ಕ್ಯಾಂಟೀನ್ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿರುವುದು ಆತಂಕ ತಂದೊಡ್ಡಿದೆ.

ಅದರಲ್ಲೂ ಕೇಂದ್ರದ ಮಾಜಿ ಮಂತ್ರಿ ಕೊಂಡಜ್ಜಿ ಬಸಪ್ಪ ಅವರಂತಹ ಮಹಾನ್ ನಾಯಕರು ಓದಿದ ಶಾಲಾ ಕಟ್ಟಡವನ್ನು ಈ ರೀತಿ ಏಕಾಏಕಿ ಕೆಡವಿ ಹಾಕಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಪುರಸಭೆ ಅಧಿಕಾರಿಗಳ ವರ್ತನೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಲೆಯ ಇತಿಹಾಸ ತಿಳಿಯದೆ ಹಾಗೂ ಶಾಲೆಯ ಅವಶ್ಯಕತೆ ಅರಿಯದೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ ಎಂಬ ನೆಪ ಮುಂದಿಟ್ಟುಕೊಂಡು ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ನೇತೃತ್ವದ ತಂಡ, ಜಿಬಿಎಂ ಶಾಲೆಯ 3 ಕೊಠಡಿಗಳನ್ನು ಕೆಡವಿ ಹಾಕಿದೆ.

ಶಾಲೆ ಸ್ಥಳಾಂತರದ ಹುನ್ನಾರದ ಆರೋಪ: ಜಿಬಿಎಂ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಜೋರಾಗಿದೆ. ಅದರಲ್ಲೂ ಶಾಲೆಯ ಕೂಗಳತೆ ದೂರದಲ್ಲಿ ಮದ್ಯದಂಗಡಿಗಳು ಇವೆ. ಶಾಲೆಯ ಸಮೀಪ ಮದ್ಯದ ಅಂಗಡಿಗಳು ಇರಬಾರದು ಎಂಬ ಆದೇಶವಿದ್ದರೂ ಪಾಲನೆ ಆಗುತ್ತಿಲ್ಲ.

ಮುಂದಿನ ದಿನಗಳಲ್ಲಿ ಶಾಲೆ ಇಲ್ಲಿಯೇ ಮುಂದುವರಿದರೆ ಮದ್ಯದಂಗಡಿಗಳಿಗೆ ಕಂಟಕ ಎದುರಾಗಲಿದೆ ಎಂಬ ಕಾರಣಕ್ಕೆ ಕಾಣದ ಕೈಗಳು ಶಾಲೆಯನ್ನೇ ಬೇರೆಡೆ ಸ್ಥಳಾಂತರಿಸುವ ಹುನ್ನಾರ ಆರಂಭಿಸಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ದಾವಣಗೆರೆ ಜಿಲ್ಲೆಯ ಮೊದಲ ಸಂಸದರು ಆರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರ ಮಂತ್ರಿ ಕೊಂಡಜ್ಜಿ ಬಸಪ್ಪನವರು ಜಿಬಿಎಂಎಸ್ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5,6,7ನೇ ತರಗತಿ ಓದಿದ್ದರು. ಇಂತಹ ಶಾಲೆ ಕಟ್ಟಡವನ್ನು ಧ್ವಂಸ ಮಾಡಿರುವುದು ನಮಗೆ ನೋವುಂಟಾಗಿದೆ.ನಿಖಿಲ್ ಕೊಂಡಜ್ಜಿ, ಕೊಂಡಜ್ಜಿ ಬಸಪ್ಪನವರ ಮೊಮ್ಮಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net