ಉದ್ಘಾಟನೆಯ ಮರುದಿನವೇ ಇಂದಿರಾ ಕ್ಯಾಂಟೀನ್​ಗೆ ಬೀಗ

indira
Published on

ಮುಳಬಾಗಿಲು: ಹಸಿದ ಹೊಟ್ಟೆಗಳಿಗೆ ರಿಯಾಯಿತಿ ದರದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ರಾತ್ರಿ ಊಟ ನೀಡುವ ಇಂದಿರಾ ಕ್ಯಾಂಟೀನ್​ ಭಾನುವಾರ ಮುಳಬಾಗಿಲಿನಲ್ಲಿ ಆರಂಭಗೊಂಡಿದ್ದು, ಮರು ದಿನ ಸೋಮವಾರದಿಂದ ಬುಧವಾರದವರೆಗೂ ಒಂದಲ್ಲ ಒಂದು ಸಮಸ್ಯೆಗಳ ಮೂಲಕ ಬೆಳಗಿನ ಉಪಹಾರ ಸೇರಿ ಕ್ಯಾಂಟೀನ್​ ಸೇವೆಗಳಿಗೆ ತಾಂತ್ರಿಕ ಅಡಚಣೆಗಳು ಅಡ್ಡ ಬಂದ ಪರಿಣಾಮ ತಿಂಡಿ ಸೇವಿಸಲು ಬಂದ ಗ್ರಾಹಕರು ಬೋರ್ಡ್​ ನೋಡಿ ಸರ್ಕಾರ ಮತ್ತು ವ್ಯವಸ್ಥೆ ಬಗ್ಗೆ ಬೇಸರಗೊಂಡು ವಾಪಸ್​ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.

ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್​ ಯೋಜನೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದರೂ ಮುಳಬಾಗಿಲಿನಲ್ಲಿ ಮಾತ್ರ 8 ವರ್ಷಗಳಿಂದ ಅಡಿಪಾಯದಲ್ಲೆ ಉಳಿದಿದ್ದ ಕ್ಯಾಂಟೀನ್​ ಕಾಮಗಾರಿ ಬಗ್ಗೆ ವಿಜಯವಾಣಿ ಪತ್ರಿಕೆ ಕಾಲಕಾಲಕ್ಕೆ ನಿರಂತರ ವರದಿ ಪ್ರಕಟಿಸಿಕೊಂಡ ನಂತರ ಆರಂಭಗೊಂಡರೂ ಈಗ ಮತ್ತೆ ಬೇಸರ ತರಿಸಿದೆ.

ವಿದ್ಯುತ್​ ಸಮಸ್ಯೆ, ಗ್ಯಾಸ್​ ಸಿಲೆಂಡರ್​ ಅಭಾವ, ಸಿಲೆಂಡರ್​ ಬಂದರೂ ಗ್ಯಾಸ್​ ಲಿಕೇಜ್​ ಭಯ, ಟೋಕನ್​ ವಿತರಣೆ ವ್ಯವಸ್ಥೆ ಇಲ್ಲದೆ ನೇರವಾಗಿ ಹಣ ಪಡೆದು ತಿಂಡಿ ಊಟ ನೀಡುವ ವ್ಯವಸ್ಥೆಗಳು ಅವ್ಯವಸ್ಥೆಗೆ ಮೂಲವಾಗಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗೂ ಪೀಕಲಾಟ ಪ್ರತಿದಿನ ಬೆಳಿಗ್ಗೆ ತಿಂಡಿಗೆ 500 ಟೋಕನ್​, ಮಧ್ಯಾಹ್ನ ಊಟಕ್ಕೆ 500 ಟೋಕನ್​, ರಾತ್ರಿ ಭೋಜನಕ್ಕೆ 500 ಟೋಕನ್​ ವಿತರಿಸಿ, ಗ್ರಾಹಕರಿಗೆ ಸಿದ್ಧ ಆಹಾರ ವಿತರಣೆ ಮಾಡುವ ಜವಾಬ್ದಾರಿ ಇಂದಿರಾ ಕ್ಯಾಂಟೀನ್​ ಗುತ್ತಿಗೆದಾರರದಾಗಿದ್ದು, ಒಂದೆಡೆಯಾದರೆ ತಿಂಡಿಗೆ ಬೆಳಿಗ್ಗೆ 7.-30ಕ್ಕೆ ಕ್ಯಾಂಟೀನ್​ ಓಪನ್​ ಆದ ತಕ್ಷಣ ಕೆಲವರು ಕುಟುಂಬ ಪರಿವಾರ ಸಮೇತ ಆಗಮಿಸಿದರೆ, ಇನ್ನೂ ಕೆಲವರು ಕ್ಯಾರಿಯರ್​ ತಂದು ಹಣ ನೀಡುತ್ತೇವೆ ನಮ್ಮ ಮನೆ ಮಂದಿಗೆಲ್ಲ ತಿಂಡಿ ನೀಡಿ ಎಂಬ ಬೇಡಿಕೆಗೆ ಸಿಬ್ಬಂದಿ ಆಕ್ಷೇಪ ವ್ಯಕ್ತ ಪಡಿಸಿದರೆ. ಬಂದವರು ಸಿಬ್ಬಂದಿಗೆ ನಿಮ್ಮ ಅಪ್ಪನ ಮನೆಯಿಂದ ಕೊಡುವುದಿಲ್ಲ, ಸರ್ಕಾರ ಕೊಡುತ್ತದೆ ಕೊಡಿ ಎಂಬ ತಗಾದೆಯಿಂದ ಶಾಲಾ&ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸೇರಿ ಹೊರ ಊರಗಳಿಂದ ಬರುವ ಗ್ರಾಹಕರಿಗೂ ಆಹಾರ ಸಿಗುವುದು ಕಷ್ಟವಾಗಿದೆ ಎಂಬ ಮಾಹಿತಿಯು ಪ್ರತ್ಯಕ್ಷ ದರ್ಶಿಗಳಿಂದ ಕೇಳಿ ಬರುತ್ತಿದೆ.

ಕ್ಯಾಂಟೀನ್​ ಮುಂಭಾಗ ವಿದ್ಯುತ್​ ತಂತಿಗಳಿಗೆ ಮರದ ಗೊಂಬೆಗಳು ಹಬ್ಬಿರುವುದು ತೆರವುಗೊಸಿ ತಂತಿಗಳನ್ನು ಸರಿಪಡಿಸಲಾಗುವುದು. ಜತೆಗೆ ಹೆಚ್ಚುವರಿ ಪವರ್​ ಬೇಕಾದರೆ ಪ್ರತ್ಯೇಕ ವಿದ್ಯುತ್​ ಪರಿವರ್ತಕಕ್ಕೆ ಅರ್ಜಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು. > ವಿ.ಎಂ.ರಮೇಶ್​ ಎಇಇ ಬೆಸ್ಕಾಂ ಮುಳಬಾಗಿಲು 1 ಲಕ್ಷ ಜನಸಂಖ್ಯೆ ಒಳಗೆ ಇರುವ ಕೇಂದ್ರಕ್ಕೆ ಒಂದು ಇಂದಿರಾ ಕ್ಯಾಂಟೀನ್​ ನಿಗದಿ ಮಾಡಿದೆ. ಸರ್ಕಾರ ಇದಕ್ಕೆ ಪ್ರತಿದಿನ 150 ತಿಂಡಿ ಸೇರಿ ಊಟ ನಿಗದಿ ಮಾಡಿದೆ. ಇಲ್ಲಿ ಬೇಡಿಕೆ ಹೆಚ್ಚಾದರೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು. ಉಳಿದ ಸಣ್ಣ ಪುಟ್ಟ ಸಮಸ್ಯೆಗಳು ತಕ್ಷಣವೇ ಸರಿಪಡಿಸಲು ಕ್ರಮವಾಹಿಸಲಾಗುವುದು. > ವಿ. ಶ್ರೀಧರ್​ ಪೌರಾಯುಕ್ತ ನಗರಸಭೆ ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net