

ಯಳಂದೂರು: ಪಟ್ಟಣದಲ್ಲಿ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗೆ ಕಳೆದ 2 ದಿನಗಳಿಂದ ಬೀಗ ಹಾಕಲಾಗಿದೆ. ಬಡವರು ದುಬಾರಿ ಬೆಲೆ ನೀಡಿ ಹೊಟೇಲ್‌ನಲ್ಲಿ ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಆಶ್ರಯ ಬಡಾವಣೆಯ ಹತ್ತಿರ 1ನೇ ವಾರ್ಡ್ ವ್ಯಾಪ್ತಿಯಲ್ಲಿ 2019ರ ಮಾರ್ಚ್ ನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಬಡ-ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್‌ನಲ್ಲಿ ಅತಿ ಕಡಿಮೆ ದರದಲ್ಲಿ ಊಟ, ತಿಂಡಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ದಿನ ಕಳೆದಂತೆ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದವರು ನಿರ್ಲಕ್ಷೃ ವಹಿಸಿದ ಪರಿಣಾಮ ಇದೀಗ ಇಂದಿರಾ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ. ಪರಿಣಾಮ ಊಟಕ್ಕೆ ಎಂದು ಬಂದವರು ಹಸಿದ ಹೊಟ್ಟೆಯಲ್ಲೇ ತೆರಳಬೇಕಾಗುವಂತಿದೆ.
1 ವರ್ಷದ ಬಿಲ್ ಬಾಕಿ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಪಟ್ಟಣ ಸೇರಿದ ಇಂದಿರಾ ಕ್ಯಾಂಟೀನ್ ಅನ್ನು ಚೆಫ್ಟಾಕ್ ಆಹಾರ ಮತ್ತು ಹಾಸ್ಪಿಟಾಲಿಟಿ ಸರ್ವೀಸ್ ಪ್ರೈ.ಲಿ.ನವರು ಗುತ್ತಿಗೆ ಪಡೆದು ನಡೆಸುತ್ತಿದ್ದರು. ಉಪಾಹಾರಕ್ಕೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10. ರೂ ದರ ನಿಗದಿಪಡಿಸಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ತಿಂಡಿ, ಎರಡು ಬಾರಿ ಊಟ ಸೇರಿದಂತೆ 52.49 ರೂ. ಆಹಾರ ವಿತರಣೆಗೆ ಟೆಂಡರ್ ಮಂಜೂರು ಮಾಡಲಾಗಿದೆ. ಗ್ರಾಹಕರಿಂದ ದಿನವೊಂದಕ್ಕೆ 25 ಮತ್ತು ಉಳಿದ 27.49 ರೂ ಅನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಆದರೆ 1 ವರ್ಷದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಕಾರಣ ಈಗ ಸ್ಥಗಿತಗೊಳಿಸಲಾಗಿದೆ.
ಇಡೀ ಜಿಲ್ಲೆಯಲ್ಲೇ ಇಂದಿರಾ ಕ್ಯಾಂಟೀನ್ ಸ್ಥಗಿತ: ಪಟ್ಟಣವೂ ಸೇರಿದಂತೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳೂ ಸೇರಿದಂತೆ ನಾಲ್ಕು ಕಡೆ ಇಂದಿರಾ ಕ್ಯಾಂಟೀನ್ ಇದೆ. ಆದರೆ ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆ ಪಡೆದ ಗುತ್ತಿಗೆದಾರರು ಕಳೆದ 2 ದಿನಗಳಿಂದ ಕ್ಯಾಂಟೀನ್ ಮುಚ್ಚಿದ್ದಾರೆ. ಏಕಾಏಕಿ ಇದನ್ನು ಮುಚ್ಚಿರುವ ಕಾರಣ ಬಡವರು, ಕೂಲಿ ಕಾರ್ಮಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರಾದ ಮನು, ಮಲ್ಲಿಕಾರ್ಜುನ, ನಾಗೇಂದ್ರ, ರಾಜೇಶ್ ಸೇರಿದಂತೆ ಹಲವರ ದೂರಿದ್ದಾರೆ.