ಅನೈತಿಕ ಚಟುವಟಿಕೆ ತಾಣವಾದ ಇಂದಿರಾ ಕ್ಯಾಂಟೀನ್

ಅನೈತಿಕ ಚಟುವಟಿಕೆ ತಾಣವಾದ ಇಂದಿರಾ ಕ್ಯಾಂಟೀನ್
Published on

ಮಕ್ಕಳ ಖುಷಿ ಕಿತ್ತುಕೊಂಡ ವಿಜಯಪುರ ಪುರಸಭೆ ಆಡಳಿತ ಸಾರ್ವಜನಿಕರ ಆಕ್ರೋಶ

ವಿಜಯಪುರ: ಇಂದಿರಾ ಕ್ಯಾಂಟೀನ್ ನಿರ್ಮಾಣದ ಹೆಸರಿನಲ್ಲಿ ಪಟ್ಟಣದ ಅಂಗತಟ್ಟಿ ನಂಜುಂಡಪ್ಪ ವೃತ್ತದ ಬಳಿ ಪುರಸಭೆಯಿಂದ ರೋಟರಿ ಶಾಲೆಗೆ 40 ವರ್ಷಗಳ ಹಿಂದೆ ರೆಸಲ್ಯೂಶನ್ ಮಾಡಿ ನೀಡಿದ್ದ ರೋಟರಿ ಶಾಲಾ ಮಕ್ಕಳ ಆಟದ ಮೈದಾನವನ್ನು ಪುರಸಭೆ ಸಿಬ್ಬಂದಿ ಸಾರ್ವಜನಿಕರ ವಿರೋಧದ ನಡುವೆಯೂ ಅಲ್ಲಿದ್ದ ಕ್ರೀಡಾ ಉಪಕರಣ ಹಾಗೂ ಕಾಂಪೌಂಡ್ ನೆಲಸಮಗೊಳಿಸಿರುವುದು ವಿವಾದಕ್ಕೆ ಎಡೆಮಾಡಿದೆ.

ಶಾಲಾ ಕಾಂಪೌಂಡ್ ಕೆಡವಿ ಆ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿ 6 ತಿಂಗಳಾದರೂ ಉದ್ಘಾಟನೆ ಭಾಗ್ಯಕಾಣದೇ ಕುಡುಕರ ಪುಂಡು ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ.

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ಅನ್ನಭಾಗ್ಯ ಹಸಿವುಮುಕ್ತ ಕರ್ನಾಟಕ ಹೆಸರಿನಡಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಕಟ್ಟಡದಲ್ಲಿ ಈವರೆಗೂ ಒಬ್ಬ ವ್ಯಕ್ತಿಯ ಹಸಿವೂ ನೀಗಲಿಲ್ಲ. ಶಾಲೆಗೆ ನೀಡಿದ ಜಾಗವನ್ನು ಅತಿಕ್ರಮವಾಗಿ ವಶಪಡಿಸಿಕೊಂಡ ಪುರಸಭೆ ಆಡಳಿತ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸಿ ಮಕ್ಕಳ ಚಟುವಟಿಕೆಗಳಿಗೆ ಎಳ್ಳುನೀರು ಬಿಡುವ ಕೆಲಸ ಮಾಡಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇತ್ತ ಶಾಲಾ ಮಕ್ಕಳು ಕ್ರೀಡಾ ಚಟುವಟಿಕೆಗೂ ತೊಂದರೆ ಉಂಟಾಗಿರುವುದಲ್ಲದೆ, ಕಲಿಕೆಗೂ ಅಡ್ಡಿಯಾಗಿದೆ. ಈ ಜಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ವಾಹನಗಳಲ್ಲಿ ಓಡಾಡುವವರು ಗಾಡಿಗಳನ್ನು ನಿಲ್ಲಿಸಿ ಕಾಲ ಕಳೆಯುವುದು, ಮೂತ್ರ ವಿಸರ್ಜನೆ ಮಾಡಿ ಅನೈರ್ಮಲ್ಯಗೊಳಿಸಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಪುಂಡರ ಅಡ್ಡೆ: ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಬಹಳ ಬೇಡಿಕೆಯಾಗಿದ್ದ ವಿಜಯಪುರ ಪುರಸಭೆ ವ್ಯಾಪ್ತಿಗೂ ಇಂದಿರಾ ಕ್ಯಾಂಟೀನ್ ಅವಶ್ಯವಿದ್ದರಿಂದ ಸಚಿವರು ಮಂಜೂರು ಮಾಡಿಸಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗಿಲ್ಲ. ಇಂದಿರಾ ಕ್ಯಾಂಟೀನ್ ಹೆಸರಲ್ಲಿ ನಿರ್ಮಾಣಗೊಂಡ ಕಟ್ಟಡ ಪುಂಡಪೋಕರಿಗಳ ಅಡ್ಡೆಯಾಗಿದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಇಂದಿರಾ ಕ್ಯಾಂಟೀನ್ ಅನ್ನು ತೆರೆಯಬೇಕು ಎಂದು ವಿಜಯಪುರ ಪುರಸಭೆ ಸದಸ್ಯ ನಂದಕುಮಾರ್ ಆಗ್ರಹಿಸಿದರು.

ವಿಜಯಪುರದ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಪುರಸಭೆಯ ಬಲಕ್ಕೆ ರೋಟರಿ ಶಾಲಾ ಮಕ್ಕಳ ಆಟವಾಡುತ್ತಿದ್ದ ಜಾಗದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಅನೈತಿಕ ತಾಣವಾಗಿ ಮಾರ್ಪಟ್ಟಿದೆ. ಇಂದಿರಾ ಕ್ಯಾಂಟೀನ್‌ನ ಸಾಮಗ್ರಿಗಳಿಗೆ ರಾಜ್ಯ ವ್ಯಾಪಿ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಅಡುಗೆ ಸಾಮಗ್ರಿ ಬಂದ ನಂತರ ಉದ್ಘಾಟನೆ ಮಾಡಲಾಗುತ್ತದೆ. -ಸಂತೋಷ್ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net