

ಕುಶಾಲನಗರ:
ಹಸಿವು ಮುಕ್ತ ಕರ್ನಾಟಕ ಪರಿಕಲ್ಪನೆ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಕುಶಾಲನಗರದಲ್ಲೂ ಯಶಸ್ವಿಯಾಗಿ ನಡೆಯುವಂತಾಗಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿ ಮಾತನಾಡಿದರು.
ಕುಶಾಲನಗರ ತಾಲೂಕು ರಚನೆ ಆದ ಕೂಡಲೇ 2018-19ರಲ್ಲಿ ಇಂದಿರಾ ಕ್ಯಾಂಟೀನ್‌ಗೆ ಕುಶಾಲನಗರ ಪಟ್ಟಣ ಅರ್ಹತೆ ಪಡೆದುಕೊಂಡಿತ್ತು. ಸ್ಥಳೀಯವಾಗಿಯೂ ಇಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಸ್ಥಳೀಯರ ಬೇಡಿಕೆಗೆ ಮನ್ನಣೆ ಕೊಟ್ಟು ಸರ್ಕಾರ ಕುಶಾಲನಗರಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿದೆ. ಹೆಚ್ಚು ದುಡ್ಡು ಕೊಟ್ಟರೆ ಮಾತ್ರ ಹೆಚ್ಚು ರುಚಿ ಎನ್ನುವ ಭಾವನೆ ಇದೆ. ಅದು ತಪ್ಪು ಎನ್ನುವುದು ಇಂದಿರಾ ಕ್ಯಾಂಟೀನ್ ಮೂಲಕ ಸಾಬೀತಾಗಬೇಕು. ಇಲ್ಲಿ ಶುಚಿ, ರುಚಿ ಕಾಪಾಡಿಕೊಳ್ಳಬೇಕು. ಇಲ್ಲಿನ ಸಿಬ್ಬಂದಿ ಸಾರ್ವಜನಿಕರಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು. ಗ್ರಾಹಕರೇ ದೇವರು ಎನ್ನುವುದನ್ನು ಅರಿತುಕೊಳ್ಳಬೇಕು. ಜನಪ್ರತಿನಿಧಿಗಳು, ಪ್ರಮುಖರು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದರೆ ಜನಸಾಮಾನ್ಯರಿಗೂ ನಂಬಿಕೆ ಬರುತ್ತದೆ. ಇಲ್ಲಿ ಒಂದು ಊಟಕ್ಕೆ 10 ರೂ. ಆದರೂ ಇದರ ಮೌಲ್ಯ 52 ರೂ. ಆಗಿರುತ್ತದೆ. ಉಳಿದ ಮೊತ್ತವನ್ನು ಸರ್ಕಾರ ಭರಿಸುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಇಂದಿರಾ ಕ್ಯಾಂಟೀನ್ ಎನ್ನುವುದು ಜನಪರ ಪರಿಕಲ್ಪನೆ. ಇದು ಹಸಿದವರ ಹೊಟ್ಟೆ ತುಂಬಿಸುವ ಯೋಜನೆ. ಹಸಿವು ಮುಕ್ತ ರಾಜ್ಯದ ಪರಿಕಲ್ಪನೆ ಇದ್ದರೆ ಸಾಲದು. ದೂರದೃಷ್ಟಿಯೂ ಬೇಕು. ಚಿಂತೆಯಲ್ಲದೆ ಬದುಕುವ ಭರವಸೆ ಮೂಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಕುಶಾಲನಗರದಲ್ಲಿ ಫ್ಲೋಟಿಂಗ್ ಪಾಪ್ಯುಲೇಷನ್ ಹೆಚ್ಚು. ಇದು ವಾಣಿಜ್ಯ ನಗರಿಯೂ ಹೌದು. ಹಾಗಾಗಿ ಇಲ್ಲಿಗೆ ಇಂದಿರಾ ಕ್ಯಾಂಟೀನ್ ಬೇಕು ಎನ್ನುವ ಬೇಡಿಕೆಯನ್ನು ಶಾಸಕ ಡಾ. ಮಂತರ್ ಗೌಡ ಈಡೇರಿಸಿದ್ದಾರೆ. ಇದರ ಜತೆಗೆ ನೆನೆಗುದಿಗೆ ಬಿದ್ದಿದ್ದ ಕಲಾಮಂದಿರ, ಯುಜಿಡಿ, ಪ.ಪಂ. ಕಚೇರಿ, ವಾಣಿಜ್ಯ ಮಳಿಗೆ ಕಟ್ಟಡ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಕಾಮಗಾರಿ ಪೂರ್ಣಗೊಳ್ಖುವ ಹಂತಕ್ಕೆ ಬಂದಿದೆ. ಕುಶಾಲನಗರ ಬಾಲಕಿಯರ ಪ್ರೌಢಶಾಲೆ ಬಾಲಕಿಯರ ಪಿಯು ಕಾಲೇಜಾಗಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಈಗಿನ ರಸ್ತೆ ಮಟ್ಟಕ್ಕೆ ಎತ್ತರಿಸಿ ನೆಲಮಹಡಿಯಲ್ಲಿ ಪಾರ್ಕಿಂಗ್‌ಗೆ ಮೀಸಲಿಡುವ ಬಗ್ಗೆ ಚಿಂತನೆ ನಡೆದಿದೆ. ಕುಶಾಲನಗರದಲ್ಲಿ ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸದ್ಯದಲ್ಲೇ ಗುದ್ದಲಿ ಪೂಜೆ ನಡೆಯಲಿದೆ ಎಂದು ಹೇಳಿದರು.
ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಟ್ಟಲಕ್ಷö್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಪುರಸಭೆ ಸದಸ್ಯರು, ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯ ನಿರೀಕ್ಷಕ ಉದಯ ಮತ್ತಿತರರು ಇದ್ದರು.