

ತುಮಕೂರು : ಹಸಿರು ಕ್ರಾಂತಿಗೂ ಮುನ್ನ ದೇಶದಲ್ಲಿ ಆಹಾರ ತತ್ವಾರ ಎದುರಾಗಿದ್ದಾಗ ವಿದೇಶದಿಂದ ಕೆಂಪುಜೋಳ ತರಿಸಿ ಜನರ ಹಸಿವು ನೀಗಿಸಿದ ಧೀರ ಮಹಿಳೆ ಇಂದಿರಾಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ 97ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನರು ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಅಮೆರಿಕಾದಿಂದ ಕೆಂಪು ಜೋಳ, ಗೋಧಿ ತರಿಸಿ, ಬಡವರಿಗೆ ಉಚಿತವಾಗಿ ಹಂಚುವ ಮೂಲಕ ಹಸಿವನ್ನು ನೀಗಿಸಿದರು. ಆ ನಂತರ ಬಾಬು ಜಗಜೀವನ್‌ರಾಂ ಅವರ ನೇತೃತ್ವದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡಿದ ಪರಿಣಾಮ ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಇಂದಿರಾಗಾಂಧಿ ಅವರು ಅಂದು ಇಟ್ಟ ದಿಟ್ಟ ಹೆಜ್ಜೆಯನ್ನು ದೇಶದ ಜನತೆ ಮರೆಯಬಾರದು ಎಂದರು.
ಇಂದಿರಾಗಾಂಧಿ ಅವರ ಸ್ಪಷ್ಟ ಹಾಗೂ ದಿಟ್ಟ ನಿಲುವಿನ ಪರಿಣಾಮ ಅಂದು ನಿರ್ಮಾಣಗೊಂಡ ಅಣೆಕಟ್ಟೆಗಳು, ರಸ್ತೆಗಳು ಸೇರಿ ಬೃಹತ್ ಯೋಜನೆಗಳು ಇಂದಿಗೂ ದೇಶದ ಜನರು ಸ್ವಾವಲಂಬನೆಯಿಂದ ಬದುಕುವಂತೆ ಮಾಡಿವೆ. ನೆರೆಹೊರೆ ರಾಷ್ಟ್ರಗಳ ಜತೆ ಉತ್ತಮ ಭಾಂಧವ್ಯ ಹೊಂದಿ, ಉತ್ತಮ ಆಡಳಿತಗಾರರಾಗಿಯೂ ಗುರುತಿಸಿಕೊಂಡಿದ್ದರು. ತಮ್ಮ 16 ವರ್ಷಗಳ ಸುದೀರ್ಘ ಆಡಳಿತದಲ್ಲಿ, ಹಲವಾರು ಏಳು-ಬೀಳುಗಳನ್ನು ಕಂಡಿದ್ದರೂ, ದೇಶದ ಜನತೆಗೋಸ್ಕರ ಎಲ್ಲವನ್ನು ತ್ಯಾಗ ಮಾಡಿದವರು ಎಂದರು.
ವ್ಯವಸಾಯ, ಬ್ಯಾಂಕಿಂಗ್, ಸಾರಿಗೆ ಕ್ಷೇತ್ರದಲ್ಲಿ ತೆಗೆದುಕೊಂಡು ದಿಟ್ಟ ನಿರ್ಧಾರದ ಫಲವಾಗಿ, ಬಡವರು ಬ್ಯಾಂಕಿಗೆ ಸೇವೆ ದೊರೆಯುವಂತಾಯಿತು. ಸಾರಿಗೆ ರಾಷ್ಟ್ರೀಕರಣದ ಫಲವಾಗಿ, ಭಾರತದ ಹಳ್ಳಿ ಹಳ್ಳಿಗಳಿಗೂ ಸಂಚಾರ ವ್ಯವಸ್ಥೆ ದೊರೆಯಿತು. ಇಂತಹ ದಿಟ್ಟ ನಿರ್ಧಾರದ ಹಿಂದೆ ಇಂದಿರಾಗಾಂಧಿ ಅವರು ದೂರದೃಷ್ಟಿಯ ಫಲ ಇದೆ. ಆದರೆ, ಅಂದು ಹುಟ್ಟಿಕೊಂಡ ನೂರಾರು ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ದೇಶವನ್ನು ಅದೋಗತಿಗೆ ತಳ್ಳುವ ಪ್ರಯತ್ನ ನಡೆದಿದೆ ಎಂದು ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಬೇಸರಿಸಿದರು.
ಎಂದಿಗೂ ದೇಶದ ಆಂತರಿಕ ವಿಚಾರಗಳನ್ನು ತಮ್ಮ ವೈಯುಕ್ತಿಕ ಪ್ರಚಾರಕ್ಕೆ ಇಂದಿರಾಗಾಂಧಿ ಬಳೆಸಿಕೊಂಡವರಲ್ಲ. ಅವರ ನಡೆ ಈಗಿನ ಪ್ರಧಾನಿಗೆ ಮಾದರಿಯಾಗಬೇಕು. ಆರ್.ರಾಮಕೃಷ್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ