ಭಾರತೀಯ ನೌಕಾಸೇನೆಯ ಹೊಸ ಹೆಜ್ಜೆಗೆ ಕಾರವಾರದಲ್ಲಿಂದು ಚಾಲನೆ

Indian oshan ship sagar
Published on

ಕಾರವಾರ: ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಹಿಂದು ಮಹಾಸಾಗರ ವಲಯ ರಕ್ಷಣಾ ಕಾರ್ಯಾಚರಣೆ ನಡೆಸುವ ಭಾರತದ ಮಹತ್ವದ ಹೊಸ ಹೆಜ್ಜೆಗೆ ರಾಷ್ಟ್ರೀಯ ಸಾಗರ ದಿನವಾದ ಇಂದು ಚಾಲನೆ ದೊರೆಯಲಿದೆ. ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ಭಾರತ ತನ್ನ 9 ಮಿತ್ರ ರಾಷ್ಟ್ರಗಳ ಒಡಗೂಡಿ ಹಿಂದು ಮಹಾಸಾಗರದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಭಾರತೀಯ ನೌಕಾಪಡೆಯ ಈ ಪ್ರಯತ್ನಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಕಾರವಾರದಲ್ಲಿ ಮಧ್ಯಾಹ್ನ ಚಾಲನೆ ನೀಡುವರು.

ಹಿಂದು ಮಹಾಸಾಗರ ವಲಯ(ಐಒಎಸ್‌) ವ್ಯಾಪ್ತಿಗೆ ಐಒಎಸ್‌ ಸಾಗರ ಹೆಸರಿನ ಹಡಗೊಂದನ್ನು ನಿಯೋಜನೆ ಮಾಡಿದ್ದು, ಹಡಗು ಕೊಚ್ಚಿಯಲ್ಲಿ ತನ್ನ ಸಮುದ್ರ ಪರಿಕ್ರಮ ಹಾಗೂ ಬಂದರು ಪರಿಶೀಲನೆ ನಡೆಸಿಕೊಂಡು ಕಾರವಾರಕ್ಕೆ ಆಗಮಿಸಿದೆ. ಚಾಲನೆಯ ಬಳಿಕ ಹಡಗು ಹಿಂದು ಮಹಾಸಾಗರ ವಲಯದಲ್ಲಿ ಮೇ ಮೊದಲ ವಾರದವರೆಗೂ ನಿಯೋಜನೆಗೊಳ್ಳಲಿದೆ. ನೌಕೆಯು ಭಾರತ ಪಶ್ಚಿಮ ಕರಾವಳಿಯ ಸ್ಪೆಷಲ್‌ ಇಕನಾಮಿಕ್‌ ಜೋನ್‌ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈ ನೌಕೆಯಲ್ಲಿ ಕೇನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್‌, ಸೇಂಚ್‌ಹೆಲ್ಸ್‌ ಸೇರಿ 9 ದೇಶಗಳ 44 ಸಿಬ್ಬಂದಿ ಇದ್ದು, ಅವರಿಗೆ ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ಜಪ್ತು, ಅಗ್ನಿ ಶಮನ, ಸಾಗರ ಸಂವಹನ, ಸೀಮೆನ್‌ಶಿಪ್‌, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವುದು ಸೇರಿ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ. "ಒನ್‌ ಓಶನ್‌ ಒನ್‌ ಮಿಷನ್‌" ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದು ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ ಹೊರಟಿದೆ.

ವಿವಿಧ ಕಾರ್ಯಕ್ರಮ:

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಈ ಕಾರ್ಯಕ್ರಮದ ಜತೆಗೆ ಕಾರವಾರದ ಸೀಬರ್ಡ್‌ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆಯ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸುವರು. 2017 ರಲ್ಲಿ ಸೀಬರ್ಡ್‌ ಯೋಜನೆಯ ಎರಡನೇ ಹಂತದ ಕಾಮಗಾರಿಗಳು ಪ್ರಾರಂಭವಾಗಿದ್ದು, ಸುಮಾರು 19,600 ಕೋಟಿ ರೂ. ವೆಚ್ಚದಲ್ಲಿ ಯುದ್ಧ ಹಡಗುಗಳ ಹೊಸ ನಿಲ್ದಾಣಗಳು, (ಹಾರ್ಬರ್‌), ವಸತಿ ಸಮುಚ್ಚಯಗಳು, ಯುದ್ಧ ಹಡಗು ರಿಪೇರಿ ಪ್ರಾಂಗಣ ಸೇರಿ ಹಲವು ಕಾಮಗಾರಿಗಳು ಮುಕ್ತಾಯವಾಗಿವೆ.

ಮುಕ್ತಾಯವಾದ ಕಾಮಗಾರಿಗಳನ್ನು ರಕ್ಷಣಾ ಸಚಿವರು ಇಂದು ಉದ್ಘಾಟಿಸುವರು. ಅಲ್ಲದೇ ಭಾರತೀಯ ನೌಕಾಪಡೆಯ ಕಮಾಂಡರ್‌ಗಳ ಈ ವರ್ಷದ ಮೊದಲ ಸಭೆಯನ್ನು ರಕ್ಷಣಾ ಸಚಿವರು ಕಾರವಾರದಲ್ಲೇ ನಡೆಸುವರು ಎಂದು ನೌಕಾಸೇನೆಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net