ಕಲ್‘ಸಂಕ’ ಅಭಿವೃದ್ಧಿಗೆ ನಿರಾಸಕ್ತಿ

Kalsanka Bridge
Published on

ಕುಮಟಾ: ಪಟ್ಟಣದ ಚಿತ್ರಿಗಿ ಸನಿಹದ ಇಕ್ಕಟ್ಟಾದ ಕಲ್ಸಂಕ ಸೇತುವೆ ಅನಾದಿ ಕಾಲದ ಪಳೆಯುಳಿಕೆಯಾಗಿ ಮುಂದುವರಿದಿದ್ದು, ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿ, ದಿನನಿತ್ಯದ ಸಂಕಟವಾಗಿ, ಎಂದೆಂದಿಗೂ ಅಭಿವೃದ್ಧಿ ಕಾಣದ ಸೇತುವೆ ಎಂಬಂತಾಗಿದೆ.

ಬ್ರಿಟಿಷರ ಕಾಲದಲ್ಲಿ ನೂರಾರು ವರ್ಷಗಳ ಹಿಂದೆ ಗಾರೆ, ಶಿಲೆ ಉಪಯೋಗಿಸಿ ನಿರ್ವಿುಸಿದ ಚಿಕ್ಕ ಸೇತುವೆ ಇದು. ಆ ಕಾಲಕ್ಕೆ ಸುಸ್ಥಿತಿಯಲ್ಲಿದ್ದ ವ್ಯಾಪಾರ-ವಹಿವಾಟಿಗೆ ಅಘನಾಶಿನಿ ಅಳಿವೆ, ತದಡಿ ಬಂದಿಗೆ ನೇರ ಪ್ರಮುಖ ಸಂಪರ್ಕ ಸೇತುವೆಯಾಗಿ ಬಳಕೆಯಾಗಿತ್ತು. ಈಗಲೂ ಈ ಸೇತುವೆ ದಾಟಿ ಚಿತ್ರಿಗಿ ಮಾತ್ರವಲ್ಲದೆ, ಹೊಲನಗದ್ದೆ, ಬಾಡ, ಕಾಗಾಲ ಈ ಮೂರು ಗ್ರಾಮ ಪಂಚಾಯಿತಿ, ಹಳಕಾರ ಅರಣ್ಯ ಪಂಚಾಯಿತಿ ವ್ಯಾಪ್ತಿಯ 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಉಪಯೋಗಕ್ಕಿರುವ ಏಕೈಕ ಹಳೆಯ ಸೇತುವೆಯಾಗಿದೆ.

ಕಲ್ಸಂಕ ಸೇತುವೆ ಶತಮಾನ ಹಳೆಯದು ಮತ್ತು ತೀರಾ ಇಕ್ಕಟ್ಟಾಗಿದೆ. ಸೇತುವೆಯ ಮೇಲೆಯೇ ಒಂದು ಬದಿಗೆ ಕಬ್ಬಿಣದ ಪೈಪುಗಳನ್ನು ಹಾಕಲಾಗಿದ್ದು, ಎರಡಡಿ ಜಾಗ ಅದಕ್ಕೇ ಮೀಸಲಾಗಿದೆ. ಇನ್ನೊಂದು ಬದಿಗೆ ವಿದ್ಯುತ್ ಟ್ರಾನ್ಸಫಾರ್ಮರ್ ರಸ್ತೆಯ ಡಾಂಬರಿನ ಅಂಚಿಗೇ ಇದೆ. ಉಳಿದ ಜಾಗದಲ್ಲಿ ಒಂದು ಬಸ್ ಸಾಗುವಾಗ ಎದುರಿನಿಂದ ಬೈಕ್​ಗಳು ಬಂದರೂ ಸುಲಭವಾಗಿ ಕಷ್ಟ ಎಂಬಂತ ಸ್ಥಿತಿ ಇದೆ. ಎಷ್ಟೋ ಸಂದರ್ಭದಲ್ಲಿ ಸೇತುವೆ ದಾಟಲು ಬೇರೆ ವಾಹನ ದಾಟುವುದನ್ನು ಕಾಯಬೇಕಾಗುತ್ತದೆ. ಸೇತುವೆಯ ಗಟ್ಟಿತನ ಹೇಗಿದೆಯೋ ಗೊತ್ತಿಲ್ಲ. ಆದರೆ, ಎಲ್ಲ ಬಗೆಯ ಭಾರೀ ವಾಹನಗಳೂ ಇಲ್ಲಿ ಓಡಾಡುತ್ತವೆ. ಈವರೆಗೂ ಇಲ್ಲಿ ದೊಡ್ಡ ಅಪಘಾತಗಳು ಆಗದೇ ಇರುವುದಕ್ಕೆ ಸೇತುವೆಯ ಅಂಚಿಗೆ ಇರುವ ದೇವರ ಸಾನ್ನಿಧ್ಯವೇ ಕಾರಣ ಎಂಬ ಭಾವನೆ ಸ್ಥಳೀಯರಲ್ಲಿದೆ.

ಈ ಕಲ್ಸಂಕ ಸೇತುವೆ ಅಗಲಗೊಳಿಸುವುದು ಅತ್ಯಂತ ಜಟಿಲ ಕಾರ್ಯ, ಸಾಕಷ್ಟು ಸ್ಥಳಾವಕಾಶ ಇಲ್ಲಿಲ್ಲ. ಆದರೆ, ಅಸಾಧ್ಯವಲ್ಲ. ಸೇತುವೆಯ ಮೇಲಿನ ಪೈಪುಗಳನ್ನು ತೆಗೆದು ಕನಿಷ್ಟ 8-10 ಅಡಿ ಅಗಲಗೊಳಿಸಿದರೆ ಮಾತ್ರ ಎರಡೂ ದಿಕ್ಕಿನಲ್ಲಿ ಏಕಕಾಲಕ್ಕೆ ವಾಹನಗಳ ಓಡಾಟ ಸಾಧ್ಯವಿದೆ. ಈ ಬಗ್ಗೆ ಸಂಬಂಧಪಟ್ಟವರು ಈವರೆಗೂ ಗಮನಹರಿಸದಿರುವುದು ಏಕೆ ಎಂಬ ಪ್ರಶ್ನೆ ಜನರಲ್ಲಿದೆ.

ಕುಮಟಾ ಪಟ್ಟಣದ ಪಶ್ಚಿಮ ದಿಕ್ಕಿನ ಹೆಬ್ಬಾಗಿಲಿನಂತಿರುವ ಕಲ್ಸಂಕ ಸೇತುವೆ ಅಗಲ ಮಾಡುವುದು ಅನಿವಾರ್ಯ. ಒಂದು ಕಡೆ ರಸ್ತೆಗೇ ವಿದ್ಯುತ್ ಟ್ರಾನ್ಸಫಾರ್ಮರ್ ಇರುವುದರಿಂದ ಅಪಘಾತವಾದರೆ ತೀರಾ ಸಮಸ್ಯೆ. ಇನ್ನೊಂದು ದಿಕ್ಕಿನಲ್ಲಿ ಸ್ವಲ್ಪವಾದರೂ ಅಗಲ ಮಾಡುವುದು ಸಾಧ್ಯವಿದ್ದರೆ ಆಡಳಿತ ವ್ಯವಸ್ಥೆ ಈ ಬಗ್ಗೆ ಈಗಲೇ ಗಮನಹರಿಸುವುದು ಸೂಕ್ತ. | ಗುರುರಾಜ ನಾಗರಕೋಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net