

ಚಿಕ್ಕಬಳ್ಳಾಪುರ: ಕಳೆದ ಮೂರು ದಶಕಗಳಿಂದಲೂ ಕೈಗೊಳ್ಳುತ್ತಿರುವ ಶಾಶ್ವತ ನೀರಾವರಿ ಹೋರಾಟವನ್ನು ಸ್ವಾತಿಕವಾಗಿ ಕಾಣಲಾಗುತ್ತಿದೆ. ಇದಕ್ಕೆ ಸವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲಗೌಡ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಮಾದರಿಯಲ್ಲಿ ಬೀದಿಗಿಳಿದು ಹೋರಾಡಲು ನಿರ್ಧರಿಸಲಾಗಿದೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖರನ್ನೊಳಗೊಂಡಂತೆ ಸಭೆಯಲ್ಲಿ ಯುವ ಜನರು, ವಿವಿಧ ಕ್ಷೇತ್ರಗಳ ಪ್ರಭಾವಿಗಳು, ತಜ್ಞರು, ಹಿರಿಯ ಅನುಭವಿಗಳು, ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಲ್ಲಿ ಹೋರಾಟವನ್ನು ಮುನ್ನಡೆಸಿಕೊಂಡು ಹೋಗುವುದರ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಬಯಲು ಸೀಮೆ ಭಾಗದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಲಭ್ಯ ನೀರಿನಲ್ಲೂ ಮಾರಕ ಲವಣಾಂಶಗಳಿವೆ. ಇದಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲು ಆಗ್ರಹಿಸಿ, ಕಳೆದ 30 ವರ್ಷಗಳಿಂದಲೂ ಹೋರಾಡಲಾಗುತ್ತಿದೆ. ಮನವಿ ಪತ್ರ ಸಲ್ಲಿಕೆ, ರ್ಯಾಲಿ, ಉಪವಾಸ ಸತ್ಯಾಗ್ರಹ, ಮುತ್ತಿಗೆ, ಬಂದ್ ಸೇರಿದಂತೆ ಎಲ್ಲ ರೀತಿಯಲ್ಲೂ ಗಮನ ಸೆಳೆಯಲಾಗಿದೆ. ಇದೆಲ್ಲವನ್ನೂ ಸ್ವಾತಿಕ ಸ್ವರೂಪವನ್ನಾಗಿ ಸರ್ಕಾರವು ಪರಿಗಣಿಸಿದೆ. ತಜ್ಞರು ಹೇಳಿದ್ದನ್ನು ಪರಿಗಣಿಸದೇ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎತ್ತಿನಹೊಳೆ ಯೋಜನೆಯ ವೆಚ್ಚಯವನ್ನು ಮೊದಲು 14 ಸಾವಿರ ಕೋಟಿ, ಬಳಿಕ 24 ಸಾವಿರ ಕೋಟಿ ರೂಗಳಿಗೆ ಪರಿಷ್ಕರಿಸಲಾಗಿತ್ತು. ಮತ್ತೊಂದೆಡೆ ಪ್ರಾರಂಭದಲ್ಲಿ 23 ಟಿಎಂಸಿ ನೀರು, ಬಳಿಕ 18 ಟಿಎಂಸಿ ನೀರು ಎನ್ನುತ್ತಲೇ ಇದೀಗ 8 ಟಿಎಂಸಿ ನೀರು ಮಾತ್ರ ಲಭ್ಯವಾಗುತ್ತದೆ ಎನ್ನುವ ಹಂತಕ್ಕೆ ಬರಲಾಗಿದೆ ಎಂದು ಕಿಡಿಕಾರಿದ್ದಾರೆ.
ಸಭೆಯಲ್ಲಿ ರೈತ, ಮಹಿಳಾ, ಕನ್ನಡಪರ, ವಕೀಲ ಸೇರಿದಂತೆ ವಿವಿಧ ಸಂಟನೆಗಳ ಪರ ಮುಖಂಡರು ಭಾಗವಹಿಸಿದ್ದರು.