ನಾಮಫಲಕದಲ್ಲಿ ಶೇ.60 ಕನ್ನಡ ಇರುವಂತೆ ಸೂಚಿಸಿ-ಕರವೇ ಮನವಿ

Karave-Manavi
Published on

ಕಾರವಾರ: ನಾಮಫಲಕದಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆಯನ್ನು ಫೆಬ್ರವರಿ 29ರ ಒಳಗಾಗಿ ಕಾರವಾರದಲ್ಲಿನ ಅಂಗಡಿಗಳ ಫಲಕಗಳಲ್ಲಿ ಜಾರಿ ಮಾಡುವಂತೆ ಕನ್ನಡ ರಕ್ಷಣಾ ವೇದಿಕೆ ಕಾರವಾರ ಘಟಕದ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಹಾಗೂ ನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಾರವಾರದಲ್ಲಿಯೂ ಸಾಕಷ್ಟು ಅಂಗಡಿಗಳು, ಹೋಟೆಲ್, ಖಾಸಗಿ ಸಂಸ್ಥೆಗಳ ನಾಮಫಲಕಗಳಲ್ಲಿ ಇಂಗ್ಲಿಷ್ ಭಾಷೆಯ ಹೆಸರುಗಳಿವೆ. ಅವುಗಳನ್ನು ಸರ್ಕಾರದ ನಿಯಮಗಳಲ್ಲಿರುವಂತೆ ಬದಲಿಸಲು ಸೂಚಿಸಬೇಕು ಇಲ್ಲದಿದ್ದರೆ ಕರವೇ ಹೋರಾಟ ನಡೆಸಲಿದೆ ಎಂದರು.

ಪೌರಾಯುಕ್ತ ಚಂದ್ರಮೌಳಿ ಮಾತನಾಡಿ, ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಮತ್ತು ಸರ್ಕಾರದ ನೀತಿ, ನಿಯಮಗಳ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸರ್ಕಾರದ ಸೂಚನೆಗಳು ಬಂದ ನಂತರ ಎಲ್ಲ ಅಂಗಡಿ-ಮುಂಗಟ್ಟುಗಳಿಗೆ ಸೂಚನೆ ನೀಡಲಾಗುವುದು ಎಂದರು.

ಕರವೇ ತಾಲೂಕು ಅಧ್ಯಕ್ಷ ನರೇಂದ್ರ ತಳೇಕರ್, ಜಿಲ್ಲಾ ಕಾರ್ವಿುಕ ಘಟಕ ಅಧ್ಯಕ್ಷ ಮಂಜುನಾಥ ನಾಯಕ, ಕರವೇ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ, ಕಡವಾಡ ಗ್ರಾಮೀಣ ಘಟಕದ ಅಧ್ಯಕ್ಷ ಶಶಾಂಕ ಕಡವಾಡಕರ್, ಗ್ರಾಮೀಣ ಘಟಕ ಉಪಾಧ್ಯಕ್ಷ ನಿತೇಶ ಕಂತ್ರಿಕರ್ ಉಪಸ್ಥಿತರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net