

ಶಿವಮೊಗ್ಗ: ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟಂಬವನ್ನು ನೋಡಿದರೆ ಹೆಮ್ಮೆ ಆಗುತ್ತದೆ. ಅವರ ತಾಯಿ, ಮಗ ಹಾಗೂ ಪತ್ನಿ ಧೈರ್ಯವನ್ನು ಮೆಚ್ಚಬೇಕು. ಅವರಿಗೆ ಸಾಂತ್ವನ ಹೇಳಲು ಮಾತ್ರ ನಮ್ಮಿಂದ ಸಾಧ್ಯ. ಅವರಿಗೆ ಸಾಂತ್ವನ ಬೇಕಿಲ್ಲ, ಪ್ರತೀಕಾರ ಬೇಕಿದೆ. ಪ್ರತೀಕಾರ ಒಂದೇ ಲಾಜಿಕಲ್ ಎಂಡ್‌ಗೆ ಮಾರ್ಗ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಾಶ್ಮೀರದ ಪಹಲ್ಗಾಮ್‌ನ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗ ವಿಜಯನಗರದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಮನೆಗೆ ಭಾನುವಾರ ರಾತ್ರಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಒಬ್ಬ ಪ್ರಜೆಗೆ ನೋವಾದರೂ ಸಹಿಸಿಕೊಳ್ಳುವುದಿಲ್ಲ. ಅದರಲ್ಲೂ 26 ಜನರನ್ನು ಕೊಂದ ಉಗ್ರರ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವುದು ನಿಶ್ಚಿತ ಎಂದು ತಿಳಿಸಿದರು.
ನಾನು ಮಂಜುನಾಥ ಅವರ ಪತ್ನಿ ಪಲ್ಲವಿ ಅವರನ್ನು ಮಾತನಾಡಿಸಿದ್ದೇನೆ. ಅವರು ಹೇಳುವ ಪ್ರಕಾರ ಹಿಂದುಗಳಿಗೆ ಮಾತ್ರ ಸಾಯಿಸಲಾಗಿದೆ. ಇದು ಇಡೀ ಜಗತ್ತಿಗೆ ಗೊತ್ತಾಗಿದೆ. ಎಲ್ಲಿ ಓಟ್ ಬ್ಯಾಂಕ್ ತಪ್ಪಿ ಹೋಗುತ್ತದೋ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎಂಬ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ನನ್ನ ಮುಖ್ಯಮಂತ್ರಿ ಅಲ್ಲ. ನಾನು ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರದ ವಿಚಾರ ಬಂದಾಗ ಯಾರು ತೆವಳಿಕೊಂಡು ಹೋಗುತ್ತಾರೋ ಅವರು ನನ್ನ ಸಿಎಂ ಅಲ್ಲ ಎಂದು ಹೇಳಿದರು.