

ಚಿಕ್ಕಬಳ್ಳಾಪುರ: ಜರ್ಮನಿಯ ಬಾನ್ ನಲ್ಲಿ ನಡೆಯುತ್ತಿರುವ ಗ್ಲೋಬಲ್ ಚೇಂಜ್ ಮೇಕರ್ ಅಕಾಡೆಮಿ ಫಾರ್ ಪಾರ್ಲಿಮೆಂಟರಿಯನ್ಸ್ (ಜಿ-ಕ್ಯಾಪ್ 2025) ಸಮಾವೇಶದಲ್ಲಿ ಸಂಸದ ಡಾ.ಕೆ.ಸುಧಾಕರ್ ಭೂ ಪುನಶ್ಚೇತನದಲ್ಲಿ ಭಾರತದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ನಾಯಕತ್ವದಲ್ಲಿ, ಪರಿಸರ ಸಂರಕ್ಷಣೆ, ಜಲಮೂಲಗಳಿಗೆ ಪುನಶ್ಚೇತನ ಸೇರಿದಂತೆ ಹಲವು ವಿಚಾರಗಳಲ್ಲಿ ಮುನ್ನಡೆ ಹೊಂದಿದೆ. ರಾಷ್ಟ್ರೀಯ ಬದ್ಧತೆ ಮತ್ತು ಪ್ರಗತಿ ಯೋಜನೆಯಡಿ ಭಾರತವು 2030 ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಕ್ಷೀಣಿಸಿದ ಭೂಮಿಯನ್ನು ಪುನಃಸ್ಥಾಪಿಸಲು ಪ್ರತಿಜ್ಞೆ ಮಾಡಿದೆ. ಈಗಾಗಲೇ 18.94 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಪ್ರಗತಿ ಕಂಡು ಬಂದಿದ್ದು ಎಂಜಿಎನ್ ಆರ್ ಜಿಎಸ್ ಅಡಿಯಲ್ಲಿ ಮಣ್ಣು ಮತ್ತು ತೇವಾಂಶ ಸಂರಕ್ಷಣೆ, ಅರಣ್ಯೀಕರಣ ಮತ್ತು ಹುಲ್ಲುಗಾವಲು ಅಭಿವೃದ್ಧಿಯನ್ನು ಸಂಯೋಜಿಸಿದೆ ಎಂದು ಸಭೆಯ ಗಮನಕ್ಕೆ ತಂದರು.
ರಾಜ್ಯ ಸರ್ಕಾರಗಳ ಮೂಲಕ ಪರಿಣಾಮಕಾರಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು ಮಿಷನ್ ಕಾಕತೀಯಡಿ ತೆಲಂಗಾಣದಲ್ಲಿ 46,531 ನೀರಾವರಿ ಟ್ಯಾಂಕ್‌ಗಳ ನವೀಕರಣ, 2.88 ಲಕ್ಷ ಎಕರೆ ನೀರಾವರಿ ಭೂಮಿ ಅಭಿವೃದ್ಧಿ, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಮೀನುಗಾರಿಕೆ, ತೆಲಂಗಾಣಕು ಹರಿತ ಹರಾಮ್ ನಡಿ ಎಂಟು ವರ್ಷಗಳಲ್ಲಿ 266 ಕೋಟಿ ಸಸಿಗಳನ್ನು ನೆಡುವ ಬೃಹತ್ ಅರಣ್ಯೀಕರಣ ಅಭಿಯಾನ, ಗುಜರಾತ್ ಸಾಮಾಜಿಕ ಅರಣ್ಯದಡಿ 2.16 ಲಕ್ಷ ಹೆಕ್ಟೇರ್‌ಗಳಲ್ಲಿ 21.63 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಆದಾಯ ಹಾಗೂ ಪರಿಸರ ಆರೋಗ್ಯವನ್ನು ಹೆಚ್ಚಿಸುವಲ್ಲಿ 2.25 ಲಕ್ಷಕ್ಕೂ ಹೆಚ್ಚು ರೈತರ ಸಹಾಭಾಗಿತ್ವದಲ್ಲಿದೆ. ಸಮುದಾಯ ಚಾಲಿತ ನಾವೀನ್ಯತೆಗಳು, ರಾಜಸ್ತಾನದಲ್ಲಿ ಕುಟುಂಬ ಅರಣ್ಯೀಕರಣ, ನಗರ ವನ ಯೋಜನೆ, ಅರಾವಳಿ ಜೀವವೈವಿಧ್ಯ ಉದ್ಯಾನವನ (ಗುರುಗ್ರಾಮ್), ತಿಲ್ಪತ್ ಕಣಿವೆ ಮತ್ತು ಯಮುನಾ ಜೀವವೈವಿಧ್ಯ ಉದ್ಯಾನ, ಕಾಶ್ಮೀರದ ವುಲರ್ ಸರೋವರ ಅಭಿವೃದ್ಧಿ, ಕ್ಯಾಚ್ ದಿ ರೇನ್, ಪಿಎಂ ಕೃಷಿ ಸಿಂಚೈ ಯೋಜನೆ ಮತ್ತು ಗ್ರೀನ್ ಇಂಡಿಯಾ ಮಿಷನ್ ಸೇರಿದಂತೆ ಹಲವು ಯೋಜನೆಗಳು ಗಮನ ಸೆಳೆದಿವೆ ಎಂದು ಸಂತಸ ವ್ಯಕ್ತಪಡಿಸಿದರು.