ಭಾರತದ ಆರ್ಥಿಕತೆ ಶೀಘ್ರ 3ನೇ ಸ್ಥಾನಕ್ಕೆ

h26-BJP 2
Published on

ಹುಬ್ಬಳ್ಳಿ: ಭಾರತವು ಆರ್ಥಿಕವಾಗಿ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಕೆಲವೇ ತಿಂಗಳಲ್ಲಿ ಇದು ವಿಶ್ವದ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ದಿಟ್ಟ ಆರ್ಥಿಕ ನಿರ್ಧಾರಗಳು ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿನ ಶ್ರೀನಿವಾಸ ಗಾರ್ಡ್​ನಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಹು-ಧಾ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ ಸದೃಢತೆ, ಆಂತರಿಕ ಭದ್ರತೆ, ನೈತಿಕ ಶಕ್ತಿ ಕಾರಣದಿಂದಾಗಿ ವಿಶ್ವವೇ ಭಾರತಕ್ಕೆ ತಲೆಬಾಗುತ್ತಿದೆ. ಮುಂದಿನ ಬಾರಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗಲು ತಾವು ಶ್ರಮಿಸಬೇಕು ಎಂದು ವಿನಂತಿಸಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಸಿದ್ಧರಾಗಬೇಕು. ಉಪ ಮುಖಮಂತ್ರಿ ಡಿ.ಕೆ. ಶಿವಕುಮಾರ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ ಮುಖ್ಯಮಂತ್ರಿಯಾಗುವುದು ಬೇಡ ಎಂದು ಕೆಲವು ಅಂಶಗಳುಳ್ಳ ಪಟ್ಟಿಯನ್ನು ಹೈಕಮಾಂಡ್​ಗೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲ ಅವರು ಈ ಬಗ್ಗೆ ಸ್ಪಷ್ಟಪಡಿಸಿದರೆ ಈ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಬಾಂಬ್ ಸಿಡಿಸಿದರು.

ನಮ್ಮ ದೇಶದ ಸಂಸ್ಕೃತಿ ಹಾಳು ಮಾಡಲು ಬಿಡುವುದಿಲ್ಲ. ಇಡೀ ಪ್ರಪಂಚ ನರೇಂದ್ರ ಮೋದಿ ಅವರ ಜತೆಗೆ ಇದೆ. ಮತ್ತೊಮ್ಮೆ ಅವರನ್ನು ನಾವು ಪ್ರಧಾನಿ ಮಾಡೋಣ ಎಂದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಪಂಚದ್ಲಲಿಯೇ ಬಿಜೆಪಿ ದೊಡ್ಡ ಕಾರ್ಯಕರ್ತರ ಪಡೆ ಹೊಂದಿದೆ. ಕೆಲ ತಪ್ಪುಗಳಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ ಜನರಿಗೆ ನೋವಾಗಿದೆ. ನಾವೆಲ್ಲರೂ ಸೇರಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸೋಣ. ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಧ್ವಜ ಹಾರಿಸೋಣ ಎಂದರು.

ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅಧ್ಯಕ್ಷತೆ ವಹಿಸಿದ್ದರು.

ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ಶಾಸಕ ಅಶೋಕ ಕಾಟವೆ, ಪ್ರಮುಖರಾದ ಡಾ. ಕ್ರಾಂತಿಕಿರಣ, ನಾಗರಾಜ ಛಬ್ಬಿ, ಷಣ್ಮುಖ ಗುರಿಕಾರ ಇತರರು ಇದ್ದರು. ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ನಿರೂಪಿಸಿದರು.

ಚುನಾವಣೆ ಅಂದರ್-ಬಾಹರ್ ಇದ್ದಂಗ

ಚುನಾವಣೆ ಪ್ರತಿ ಐದು ವರ್ಷಕ್ಕೊಮ್ಮೆ ಬರುತ್ತದೆ. ಇದು ಅಂದರ್-ಬಾಹರ್ ಆಟ ಇದ್ದಂಗ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಅಂಕಿ ಬಂದಿಲ್ಲ. ಹಾಗಂತ ನಾವು ಕೈಕಟ್ಟಿ ಕೂಡಬಾರದು. ನಿರಂತವಾಗಿ ಆಟ ಆಡಬೇಕು. ನಮ್ಮ ಸರತಿಯೂ ಬರುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಕೆಲವರು ಮುಸ್ಲಿಮರ ಮೀಸಲಾತಿ ತೆಗೆದಿದ್ದರಿಂದ ನಾವು ಸೋತೆವು ಎನ್ನುತ್ತಿದ್ದಾರೆ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಟ್ಟಿಲ್ಲ. ಜಾತಿ ಆಧಾರಿತ ಮೀಸಲಾತಿ ಇದೆ. ರಾಜ್ಯ ಸರ್ಕಾರ ಎಸ್​ಸಿ, ಎಸ್​ಟಿ, ಇತರ ಸಮುದಾಯಕ್ಕೆ ಮೀಸಲಾತಿ ಘೊಷಣೆ ಮಾಡಿತು. ಅದನ್ನು ಆಯಾ ಸಮಾಜಕ್ಕೆ ಮುಟ್ಟಿಸುವಲ್ಲಿ ವಿಫಲವಾದೆವು ಎನಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net