ಭರತನಾಟ್ಯದಿಂದ ಬೆಳೆಯಲಿದೆ ಭಾರತದ ಸಂಸ್ಕೃತಿ

h4-bharat natya
Published on

ಹುಬ್ಬಳ್ಳಿ: ಭರತ ನಾಟ್ಯ ಅತ್ಯದ್ಭುತ ಕಲೆ. ಈ ಕಲೆ ಮೂಲಕ ಭಾರತದ ಸಂಸ್ಕೃತಿ ಬೆಳೆಸಲು ಸಾಧ್ಯ ಎಂದು ಬೆನಕಾ ಪಿಯು ಕಾಲೇಜ್‌ನ ಪ್ರಾಂಶುಪಾಲೆ ಡಾ. ಶೈಲಜಾ ವಿನೋದ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಸುಜನಿ ನಾಟ್ಯ ಶಾಲೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ನೃತ್ಯ ಸಂಗಮ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಥೆಯನ್ನು ನಾಟ್ಯ ರೂಪದಲ್ಲಿ ಪ್ರದರ್ಶಿಸುವುದು ಸುಲಭದ್ದಲ್ಲ. ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಈ ಕಲೆ ತುಂಬಾ ಕಷ್ಟ. ಅದನ್ನು ಕಲಿಸುವ ಗುರುಗಳು, ವಿದುಷಿಗಳ ಕಾರ್ಯ ಶ್ಲಾಘನೀಯ ಎಂದರು.
ನಾಟ್ಯಾಂಜಲಿ ಕಲಾಮಂದಿರದ ವಿದುಷಿ ವನಿತಾ ಮಹಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಮೊದಲು ಮಾತೃ ಭಾಷೆ ಕಲಿಸಿ. ನಂತರ ಯಾವುದೇ ಭಾಷೆಯಲ್ಲಾದರೂ ಶಿಕ್ಷಣ ಕೊಡಿ. ಇದರ ಜತೆಗೆ ನೃತ್ಯ ಶಿಕ್ಷಣ ನೀಡಿ. ಇದು ಮಕ್ಕಳಿಗೆ ನಮ್ಮ ಕಲೆ-ಸಂಸ್ಕೃತಿ ತಿಳಿಸುತ್ತದೆ ಎಂದರು. ಉದ್ಯಮಿ ಗಣೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ನಾಟ್ಯ ಶಾಲೆಯ ವಿದ್ಯಾರ್ಥಿಗಳು ವೀರ ವನಿತೆ ಕೆಳದಿ ಚನ್ನಮ್ಮ ವಿಶೇಷ ನೃತ್ಯ ಪ್ರದರ್ಶಿಸಿದರು. ವಿಶ್ವಧರ್ಮ ಅಂಗವಿಕಲ ಮಕ್ಕಳ ಶಾಲೆಯ ಅಧ್ಯಕ್ಷ ಐ.ಕೆ. ಲಕ್ಕುಂಡಿ, ಸುಜನಿ ನಾಟ್ಯ ಶಾಲೆಯ ಮುಖ್ಯಸ್ಥೆ ವಿದುಷಿ ಸುನಿತಾ ಪೂಜಾರಿ, ಜಗನ್ನಾಥ ಪಿ., ಆರತಿ ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net