

ಬಾಗಲಕೋಟೆ: ಔಷಧ ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು, ಔಷಧ ಶಾಸದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಎಂದು ಜಮ್ಮುವಿನ ಸಿಎಸ್‌ಐಆರ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇಂಟಿಗ್ರೇಟಿವ್ ಮೆಡಿಸಿನ್, ಕ್ಯಾನ್ಸರ್ ಔಷಧ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ. ಅಜೀತಕುಮಾರ ಸಕ್ಸೆನಾ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಶನಿವಾರ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಬಿ. ಫಾರ್ಮಾ, ಎಂ. ಫಾರ್ಮ ಹಾಗೂ ಫಾರ್ಮ. ಡಿ ಕೋರ್ಸಿನ ಘಟಿಕೋತ್ಸವದಲ್ಲಿ ಪದವಿ ಪ್ರದಾನಮಾಡಿ ಅವರು ಮಾತನಾಡಿದರು.
ಅನೇಕ ದೇಶಗಳಿಗೆ ಭಾರತ ಔಷಧಗಳನ್ನು ರಫ್ತು ಮಾಡುವ ಮೂಲಕ ಔಷಧ ವಿಜ್ಞಾನ ಕ್ಷೇತ್ರಕ್ಕೆ ಭಾರತ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಂಡು ಔಷಧ ಗುಣಮಟ್ಟ ಮತ್ತು ಮಾನದಂಡಗಳನ್ನು ಕಾಯ್ದುಕೊಳ್ಳುವ ಮತ್ತು ಗುಣಮಟ್ಟವನ್ನು ಪಾಲಿಸುವಲ್ಲಿ ಔಷಧಾಲಯ ಪದವೀಧರರು ವಹಿಸುವ ಪಾತ್ರ ಮಹತ್ವದಾಗಿದೆ. ಔಷಧ ಶಾಸದವರಿಗೆ ಬೇರೆ ಬೇರೆ ಕ್ಷೇತ್ರದಲ್ಲೂ ಉದ್ಯೋಗ ಅವಕಾಶಗಳಿವೆ ಎಂದರು.
ಬೆಂಗಳೂರಿನ ಇನ್ನುವೆಲ್ ಬಯೋಸೈನ್ಸ್ ಪ್ರೈ.ಲಿ.ನ ಡಾ. ಕೊಟೆಪ್ಪಾ ಪರಿ ಮಾತನಾಡಿ, ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಬಹಳಷ್ಟು ಉದ್ಯೋಗ ಅವಕಾಶಗಳಿವೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಕಾರ್ಯಾದ್ಯಕ್ಷ ವೀರಣ್ಣ ಚರಂತಿಮಠ ಮಾರ್ಗದರ್ಶನದಲ್ಲಿ ಈ ಔಷಧ ಮಹಾವಿದ್ಯಾಲಯ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಇಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ಡಾ. ವೈ. ಶ್ರೀನಿವಾಸ ಇದ್ದರು.
ಪದವಿ ಪ್ರದಾನ : 105 ಬಿ. ಫಾರ್ಮ ವಿದ್ಯಾರ್ಥಿಗಳಿಗೆ ಹಾಗೂ 38 ಎಂ. ಫಾರ್ಮ, 18 ಫಾರ್ಮ ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.