ಜ್ಞಾನ, ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯ: ವಿಜಯೇಂದ್ರ

8 ಎಸ್ಕೆಪಿ 2
ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ-ವಿಜ್ಞಾನ ಮೇಳವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ವಿ.ಗೋಪಾಲಕೃಷ್ಣ, ರಾಜಾರಾಮ್, ಎಚ್.ಎಂ.ರಾಘವೇಂದ್ರ, ಜಿ.ಎಸ್.ಶಶಿಧರ್ ಇತರರಿದ್ದರು.
Published on

ಶಿಕಾರಿಪುರ: ವೇದಗಳ ಕಾಲದಿಂದಲೂ ಜ್ಞಾನ, ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನುಪಮ. ಮನುಷ್ಯನಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಸುತ್ತಮುತ್ತಲಿನ ಪ್ರಕೃತಿಯೇ ಪ್ರೇರಣಾದಾಯಕ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಮೈತ್ರಿ ಶಾಲೆ ಆವರಣದಲ್ಲಿ ವಿದ್ಯಾಭಾರತಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಮೈತ್ರಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಿಂದ ಮಂಗಳವಾರ ಆಯೋಜಿಸಿದ್ದ ಜ್ಞಾನ-ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಕ್ಕಳು ಆಧುನಿಕ ತಂತ್ರಜ್ಞಾನಗಳ ಅರಿವು ಮೂಡಿಸಿಕೊಳ್ಳಬೇಕು. ಇಂದಿನ ಎಷ್ಟೋ ಆವಿಷ್ಕಾರಗಳಿಗೆ ನಮ್ಮ ಪುರಾಣ ಇತಿಹಾಸಗಳು ಸಾಕ್ಷಿಯಾಗಿ ನಿಂತಿವೆ. ಇಂದಿನ ಸಮಯ, ಸಂದರ್ಭಕ್ಕೆ ಅನುಗುಣವಾಗಿ ನಾವು ಶಿಕ್ಷಣದ ಓಘಕ್ಕೆ ಹೊಂದಿಕೊಳ್ಳಬೇಕು. ಜ್ಞಾನದ ಹರಿವಿನ ಜತೆಗೆ ವಿಜ್ಞಾನದ ಕವಚ ಇರಬೇಕು ಎಂದರು.
ವಿದ್ಯಾಭಾರತಿಯು ಶಿಕ್ಷಣ ಸೇರಿ ಅನೇಕ ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ಸಮರ್ಪಿಸಿಕೊಂಡಿದೆ. ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರದಾಸೋಹ ಮಾಡುತ್ತಿದೆ. 1952ರಲ್ಲಿ ಕುರುಕ್ಷೇತ್ರದಲ್ಲಿ ಶಿಶುಮಂದಿರದ ಮೂಲಕ ಪ್ರಾರಂಭವಾದ ವಿದ್ಯಾಭಾರತಿ 775ಕ್ಕೂ ಹೆಚ್ಚು ಶಾಲೆಗಳಲ್ಲಿ ಲಕ್ಷೋಪ ಲಕ್ಷ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವುದು ಹೆಮ್ಮೆ. ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಕಲಿಸುತ್ತಿದೆ. ಇದೊಂದು ರಾಷ್ಟ್ರೀಯ ಚಿಂತನೆಗಳನ್ನು ಸಾರುವ ಹೆಮ್ಮರವಾಗಿ ಬೆಳೆದಿದೆ ಎಂದು ಬಣ್ಣಿಸಿದರು.
ಯುವಶಕ್ತಿ ಭಾರತದ ಸಂಪತ್ತು. ಪ್ರಸ್ತುತ ಐಎಎಸ್ ಮತ್ತು ಐಪಿಎಸ್‌ಗಳಿಗೆ ಗ್ರಾಮೀಣ ಪ್ರತಿಭೆಗಳೇ ಅತಿ ಹೆಚ್ಚು ಆಯ್ಕೆ ಆಗುತ್ತಿರುವುದು ಸಂತಸದ ವಿಚಾರ. ರಾಷ್ಟ್ರೀಯ ಶಿಕ್ಷಣ ನೀತಿ ಅದ್ಭುತವಾಗಿದೆ. ಇಂದಿನ ಶಿಕ್ಷಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ನಾವು ಪರಾಮರ್ಶಿಸಬೇಕು. ಯವಕರು ರಾಷ್ಟ್ರೀಯ ವಿಚಾರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಮುಂದಿನ ಐದು ದಶಕಗಳಲ್ಲಿಯೂ ಭಾರತ ಅಗ್ರಸ್ಥಾನದಲ್ಲಿರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭವಿಷ್ಯ ಭಾರತಕ್ಕೆ ಪೂರಕವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಸಮರ್ಥವಾದ ಆಡಳಿತದಲ್ಲಿ ಭಾರತ ಪ್ರಕಾಶಿಸುತ್ತಿದೆ. ಯುವಪೀಳಿಗೆ ನಮ್ಮ ರಾಷ್ಟ್ರದ ಸಂಪತ್ತು. ಯುವಕರು, ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಸಾಗಿ, ಸದ್ವಿಚಾರಗಳನ್ನು ಹಂಚಬೇಕು ಎಂದು ತಿಳಿಸಿದರು.
ಶಿವಮೊಗ್ಗ ವಿದ್ಯಾಭಾರತಿ ಅಧ್ಯಕ್ಷ ವಿ.ಗೋಪಾಲಕೃಷ್ಣ, ವಿಭಾಗ ಪ್ರಮುಖ ರಾಜಾರಾಮ್, ಕಾರ್ಯದರ್ಶಿ ಎಚ್.ಎಂ.ರಾಘವೇಂದ್ರ, ಬಿಇಒ ಜಿ.ಎಸ್.ಶಶಿಧರ್, ಪ್ರಾಚಾರ್ಯರಾದ ಡಾ. ಜಿ.ಎಸ್.ಶಿವಕುಮಾರ್, ಪಿ.ವಿಶ್ವನಾಥ್, ಮುಖ್ಯಶಿಕ್ಷಕ ಪ್ರಶಾಂತ್ ಕುಬುಸದ್ ಇತರರಿದ್ದರು.

2010ರಲ್ಲಿ ತಂದೆ ಮುಖ್ಯಮಂತ್ರಿ ಆದಾಗ ಕಾಲೇಜಿನ ಶುಲ್ಕ ಕಟ್ಟಲಾಗದ ವಿದ್ಯಾರ್ಥಿಗೆ ಸಹಾಯ ಮಾಡಿದ್ದೆ, ಈ ವರ್ಷ ಆ ವಿದ್ಯಾರ್ಥಿ ಅಮೆರಿಕಾದ ಫಿಲಿಡೆಲ್ಫಿಯಾದ ವಿವಿಯಲ್ಲಿ ವಿಜ್ಞಾನಿಯಾಗಿ ಪಿಎಚ್.ಡಿ ಮಾಡಲು ಆಯ್ಕೆಯಾಗಿರುವ ಭಾರತದ ಏಕೈಕ ವಿದ್ಯಾರ್ಥಿಯಾಗಿದ್ದಾನೆ ಎಂಬುದನ್ನು ಕೇಳಿದಾಗ ಅತ್ಯಂತ ಸಂತಸವಾಯಿತು. ಗುರಿ, ಛಲ ಹಾಗೂ ಸಾಧನೆ ಎಂದರೆ ಹೀಗಿರಬೇಕು.ಬಿ.ವೈ.ವಿಜಯೇಂದ್ರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net