ಭಾರತೀಯರು ಎಂದಿಗೂ ಕೊಡುವುದಿಲ್ಲ ಕೈ

20sirsi5
Published on

ಶಿರಸಿ: ಎಲ್ಲ ಉದ್ಯೋಗಕ್ಕಿಂತ ಕೃಷಿ ಉತ್ತಮ ಕಾರ್ಯವಾಗಿದ್ದು, ರೈತ ಎಲ್ಲರಿಗೂ ಹಂಚಿ ತಿನ್ನುತ್ತಾನೆ. ಆದರೆ, ರೈತರಿಗೆ ಕಷ್ಟ ಮುಗಿಯುವುದಿಲ್ಲ. ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಣ್ಣದಮಠ ವಚನ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇವಲ 20 ಕೋಟಿ ರೈತರು, ದೇಶದ 150 ಕೋಟಿ ಜನರಿಗೆ ಆಹಾರ ನೀಡುತ್ತಿದ್ದಾರೆ. ಆದರೆ, ಕೃಷಿಕನ ಸಾಲವೇ ತೀರದ ಸ್ಥಿತಿ ಇದೆ. ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡುವುದರಿಂದ ಸಮಾಜದಲ್ಲಿ ಆಗುತ್ತಿರುವ ಅನಾಚಾರಗಳನ್ನು ತಪ್ಪಿಸಲು ಸಾಧ್ಯ ಎಂದರು.

ನಿಸರ್ಗದಲ್ಲಿ ಸಹಜವಾಗಿ ಉತ್ಪತ್ತಿಯಾಗುವುದು ಸಾಹಿತ್ಯ. ಭಾರತದಲ್ಲಿ ಕೈ ಮುಗಿಯುವ ಪದ್ಧತಿ ರೂಢಿಯಲ್ಲಿದ್ದರೆ, ವಿದೇಶಗಳಲ್ಲಿ ಕೈ ಕೊಡುವುದು ಇದೆ. ಭಾರತೀಯರು ಎಂದಿಗೂ ಕೈಕೊಡುವುದಿಲ್ಲ. ಕೈಮುಗಿದು ಎಲ್ಲರೂ ನಮ್ಮವರು ಎಂದು ಹತ್ತಿರದಿಂದ ಆತಿಥ್ಯ ನೀಡುತ್ತಾರೆ ಎಂದರು.

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಜಿ.ವಿ. ಭಟ್ಟ ಕೊಪ್ಪಲುತೋಟ ಮಾತನಾಡಿ, ಸಾಹಿತ್ಯವೆಂದರೆ ಅದು ಮನುಷ್ಯನ ಸೃಜನಶೀಲ ಅಭಿವ್ಯಕ್ತಿ. ಅದನ್ನು ಅಧ್ಯಯನದಿಂದ ಉಳಿಸಿ-ಬೆಳೆಸಿಕೊಳ್ಳಬಹುದು ಎಂದರು.

ಮುಕ್ತಕ ಕವಿ ಕೃಷ್ಣ ಪದಕಿ, ಚುಟುಕು ಕವಿ ಜಗದೀಶ ಭಂಡಾರಿ ಹಾಗೂ ಚುಟುಕು ಕವಯತ್ರಿ ಭಾರತಿ ನಲವಡೆ ಅವರಿಗೆ ಚುಟುಕು ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ರಾಜ್ಯ ಸಲಹಾ ಸಮಿತಿ ಸದಸ್ಯ ಜಿ.ಎ. ಹೆಗಡೆ ಸೋಂದಾ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಂಜುನಾಥ ಹೆಗಡೆ ಹೂಡ್ಲಮನೆ, ಪದಾಧಿಕಾರಿ ದೀಪಾಲಿ ಸಾಂಮತ, ಗುರುಸಿದ್ದರಾಜ ಮಹಿಳಾ ಮಂಡಳ ಅಧ್ಯಕ್ಷೆ ವೀರಮ್ಮ ಹಿರೇಮಠ, ಲಯನ್ಸ್ ಕ್ಲಬ್ ಅಧ್ಯಕ್ಷ ಗುರುರಾಜ ಹೊನ್ನಾವರ ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಕಚುಸಾಪ ಅಧ್ಯಕ್ಷ ಮನೋಹರ ಮಲ್ಮನೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಹಳೆಯೂರ ನಿರೂಪಿಸಿದರು.

ನಿರ್ಣಯಗಳು:

1) ಎಲ್ಲ ಭಾಷೆಯ, ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಶಿಶು ಸಾಹಿತ್ಯ ಕೊರತೆಯಾಗಿದೆ. ಶಿಶು ಸಾಹಿತ್ಯವನ್ನು ಬರೆಯುವ ಅಗತ್ಯವಿದೆ. 2)ಯಾವುದೇ ಸಮ್ಮೇಳನ ನಡೆಸುವಾಗ ಅದಕ್ಕೆ ಆರ್ಥಿಕ ನೆರವನ್ನು ಆಡಳಿತಾರೂಢ ಸರ್ಕಾರವೇ ಭರಿಸಿದರೆ ಒಳಿತು. 3) ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಯೋಗ. ಉತ್ತಮ ವೈದ್ಯರು, ಅತ್ಯುತ್ತಮವಾದ ವ್ಯವಸ್ಥೆ ನೀಡಬೇಕು. 4) ಶಿರಸಿಯಲ್ಲಿ ಸಾಹಿತ್ಯ ಭವನ ನಿರ್ಮಿಸಬೇಕು. 5)ನಗರದಲ್ಲಿ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು. 6) ನಗರದಲ್ಲಿ ನೈರ್ಮಲ್ಯದ ಕಡೆಗೆ ವಿಶೇಷ ಮುತುವರ್ಜಿ ವಹಿಸಬೇಕು. 7) ಶಿಕ್ಷಣ ಪದ್ಧತಿಯಲ್ಲಿ ಕನ್ನಡದ ಎಲ್ಲ ಸಾಹಿತ್ಯ ಪ್ರಕಾರಗಳ ಬಳಕೆ. 8) ಸುಸಜ್ಜಿತವಾದ ವ್ಯಾಯಾಮ ಶಾಲೆ ಮಂಜೂರು 9) ಸಾಹಿತ್ಯ ಸಾಧನೆ ಮಾಡಿದ ವಯೋವೃದ್ಧರಿಗೆ ಮಾಸಾಶನ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net