

ಮೈಸೂರು: ಯಾವುದೇ ಸ್ವಾರ್ಥವಿಲ್ಲದೆ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಭಾರತೀಯರು ಹೊಂದಿದ್ದಾರೆ ಎಂದು ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಮೆರಿಕದ ನ್ಯೂಯಾರ್ಕ್‌ನ ಬಸವ ಇಂಟರ್‌ನ್ಯಾಷನಲ್ ಕಾರ್ಪೊರೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಬಸವೇಶ್ವರರು ಜಗತ್ತಿನ ಶ್ರೇಷ್ಠ ಸಂತರಲ್ಲಿ ಒಬ್ಬರು. ಅವರ ಸ್ಮರಣೆ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಭಾರತ ಆಧ್ಯಾತ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಪತ್ಭರಿತ ರಾಷ್ಟ್ರ. ಋಷಿಮುನಿಗಳು, ಸಂತರು, ಶರಣರು, ದಾರ್ಶನಿಕರು ಅದನ್ನು ಶ್ರೀಮಂತಗೊಳಿಸಿದರು. ಮುಂದಿನ ಪೀಳಿಗೆಗೆ ಇದನ್ನೆಲ್ಲ ತಿಳಿಸುವ ಅಗತ್ಯವಿದೆ. ಭಾರತದಿಂದ ಬಂದು ಅಮೆರಿಕದಲ್ಲಿ ನೆಲೆಸಿದ್ದರೂ, ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಮರೆಯದೇ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ವಿಶೇಷವಾದುದು ಎಂದು ಹೇಳಿದರು.
ಭಗವಂತ ಮನುಷ್ಯನಿಗೆ ಆಲೋಚನಾ ಶಕ್ತಿ ನೀಡಿದ್ದಾನೆ. ಅದನ್ನು ಬಳಸಿಕೊಂಡು ಜೀವನದ ಸಮಸ್ಯೆಗಳನ್ನು ಎದುರಿಸಬೇಕು. ಜೀವನದಲ್ಲಿ ಅನೇಕ ದ್ವಂದ್ವಗಳಿರುತ್ತವೆ. ಅವುಗಳನ್ನು ಸರಿದೂಗಿಸಿಕೊಂಡು ಹೋಗುವುದು ಅಗತ್ಯ. ಲೌಕಿಕ-ಪಾರಮಾರ್ಥ ಎರಡನ್ನು ಸರಿದೂಗಿಸಿಕೊಂಡು ಬಾಳಬೇಕೆಂದು ನಿಜಗುಣ ಶಿವಯೋಗಿಗಳು ಹೇಳಿದ್ದಾರೆ. ಮಾಡುವ ಕಾರ್ಯವೆಲ್ಲ ಭಗವಂತನ ಸೇವೆ ಎಂದು ಮಾಡಬೇಕೆಂದು ಶಂಕರಾಚಾರ್ಯರು ತಿಳಿಸಿದ್ದಾರೆ. ಹಾಗಾದಾಗ ಮಾತ್ರ ಅದು ನಿಸ್ವಾರ್ಥ ಸೇವೆ ಎನಿಸುತ್ತದೆ ಎಂದು ಹೇಳಿದರು.
ಕ್ಷೇವಿಯರ್ ಸ್ಕೂಲ್ ಆಫ್ ಮೆಡಿಸಿನ್‌ನ ಅಧ್ಯಕ್ಷ ರವಿ ಬೋಪಲಾಪುರ, ಸಂಸ್ಥೆಯ ಅಧ್ಯಕ್ಷೆ ಉಷಾ ಮೈಸೂರ್‌ಕರ್ ಹಾಗೂ ಇತರರು ಇದ್ದರು.