ಮೈಸೂರಿನಲ್ಲಿ ಸ್ವಚ್ಛತಾ ಲೀಗ್

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಪ್ರತಿಯೊಂದು ನಗರಗಳನ್ನು ಸ್ವಚ್ಛ ಹಾಗೂ ಸುಂದರವಾಗಿ ರೂಪಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾ ಲಯ ‘ಇಂಡಿಯನ್ ಸ್ವಚ್ಛತಾ ಲೀಗ್ 2.0’ ಸ್ಪರ್ಧೆ ಹಮ್ಮಿಕೊಂಡಿದ್ದು, ಈ ಬಾರಿಯ ಸ್ವಚ್ಛತಾ ಲೀಗ್‌ನಲ್ಲಿ ಮೈಸೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ಪ್ರಥಮ ಬಾರಿಗೆ 2022ರಲ್ಲಿ ಇಂಡಿಯನ್ ಸ್ವಚ್ಛತಾ ಲೀಗ್ ಪ್ರಾರಂಭಿಸಲಾಯಿತು. ತ್ಯಾಜ್ಯ ಮುಕ್ತ ನಗರ ನಿರ್ಮಾಣ ಮಾಡುವುದು ಈ ಸ್ವಚ್ಛತಾ ಲೀಗ್‌ನ ಪ್ರಮುಖ ಉದ್ದೇಶವಾಗಿದ್ದು, ಇದು ಅಂತರ ನಗರಗಳ ನಡುವಿನ ಸ್ಪರ್ಧೆಯಾಗಿದೆ. ಕಳೆದ ಬಾರಿ 1800ಕ್ಕೂ ಹೆಚ್ಚು ನಗರಗಳು ಈ ಲೀಗ್‌ನಲ್ಲಿ ಭಾವಹಿಸಿತ್ತು. ವಿಶೇಷವಾಗಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿ ಅವರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಸ್ವಚ್ಛತಾ ಲೀಗ್ ಹೊಂದಿದೆ.

ಕಳೆದ ಬಾರಿ ಹಮ್ಮಿಕೊಂಡ ಸ್ವಚ್ಛತಾ ಲೀಗ್‌ನಲ್ಲಿ ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ನಾಗರಿಕ ಸ್ವಯಂ ಸೇವಕರು, ಯುವ ನಾಯಕರು ಮತ್ತು ಸೆಲೆಬ್ರಿಟಿಗಳು ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿವಿಧ ನಗರಗಳು ವಿವಿಧ ಸೃಜನಾತ್ಮಕ ಮತ್ತು ವಿಶಿಷ್ಟವಾದ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿತ್ತು.

ಯುವಜನರು ಭಾಗಿ

ಕಳೆದ ಬಾರಿ ಇಂಡಿಯನ್ ಸ್ವಚ್ಛತಾ ಲೀಗ್‌ಗೆ ದೊರೆತ ಅಭೂತಪೂರ್ವ ಸ್ಪಂದನೆಯ ಹಿನ್ನೆಲೆಯಲ್ಲಿ ಈ ಬಾರಿಯೂ ಸ್ವಚ್ಛತಾ ಲೀಗ್ ಹಮ್ಮಿಕೊಳ್ಳಲಾಗಿದೆ. ಈ ಸ್ವಚ್ಛತಾ ಲೀಗ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ತೊಡಗಿಸಲು ನಗರ ಪಾಲಿಕೆ ಯೋಜನೆ ಸಿದ್ಧಪಡಿಸಿದೆ. ಇದಕೋಸ್ಕರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.

ಈ ಬಾರಿಯ ಸ್ವಚ್ಛತಾ ಲೀಗ್ ಸೆ.17ಕ್ಕೆ ಚಾಲನೆ ದೊರೆಯಿತು. ಅ.2 ರಂದು ಸ್ವಚ್ಛತಾ ಲೀಗ್ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಸ್ವಚ್ಛತಾ ಜಾಥಾ, ಮಾನವ ಸರಪಳಿ ನಿರ್ಮಾಣ, ಸಹಿ ಸಂಗ್ರಹ, ಶ್ರಮದಾನ, ಗೋಡೆ ಚಿತ್ರ ರಚನೆ ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಲೀಗ್ ಪ್ರಾರಂಭದ ದಿನದಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಅತಿಹೆಚ್ಚು ತ್ಯಾಜ್ಯ ಸಂಗ್ರಹಿಸಿದ ವಿದ್ಯಾರ್ಥಿಗಳ ತಂಡಕ್ಕೆ ಮೊದಲ ಬಹುಮಾ ನವಾಗಿ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ. ಹಾಗೂ ತೃತೀಯ 3 ಸಾವಿರ ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ. ಕಳೆದ ಬಾರಿಯ ಸ್ವಚ್ಛತಾ ಲೀಗ್‌ನಲ್ಲಿ ಚಂಡೀಗಢ ಹಾಗೂ ನವಿ ಮುಂಬೈ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದವು. ಈ ಬಾರಿ ಸಾಂಸ್ಕೃತಿಕ ನಗರಿ ಪ್ರಥಮ ಸ್ಥಾನ ಪಡೆಯಲಿ ಎಂಬುದು ಮೈಸೂರಿಗರ ಹಾರೈಕೆಯಾಗಿದೆ.

ಮೈಸೂರು ನಗರ 2019ರಿಂದ ನಿರಂತರವಾಗಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿಯನ್ನು ಪಡೆಯುತ್ತಿದೆ. ಮೈಸೂರು ತ್ಯಾಜ್ಯಮುಕ್ತ ನಗರ ಪ್ರಶಸ್ತಿ ಪಡೆಯುತ್ತಾ ಬಂದಿದ್ದರೂ ನಗರದ ಹಲವಾರು ಭಾಗಗಳು ತ್ಯಾಜ್ಯದ ಕೊಂಪೆಯಾಗಿವೆ. ನಗರವನ್ನು ಸ್ವಚ್ಛವಾಗಿಡಲು ನಗರ ಪಾಲಿಕೆ ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸಿದ್ದರೂ ಕೆಲವು ಜನರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆದು ನಗರದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಇಂತಹವರ ಮನಸ್ಥಿತಿ ಬದಲಾಯಿಸಲು ಹಾಗೂ ಯುವಜನರ ಮೂಲಕ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಇಂಡಿಯನ್ ಸ್ವಚ್ಛತಾ ಲೀಗ್ ಸಹಕಾರಿಯಾಗಬಲ್ಲದು.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ

2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಹಾಗೂ ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ ಸೇರಿದಂತೆ ಸ್ವಚ್ಛತೆಯಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಇಂಡಿಯನ್ ಸ್ವಚ್ಛತಾ ಲೀಗ್‌ನಲ್ಲಿ ಮೈಸೂರು ನಗರ ಭಾಗವಹಿಸಿದೆ. ಅ.2ರವರೆಗೆ ನಡೆಯಲಿರುವ ಈ ಸ್ವಚ್ಛತಾ ಲೀಗ್‌ನಲ್ಲಿ ಹಲವು ವೈವಿಧ್ಯಮಯ ಸ್ವಚ್ಛತಾ ಚಟುಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಲೀಗ್‌ನಲ್ಲಿ ತೊಡಗಿಸಿಕೊಳ್ಳ ಲಾಗುತ್ತಿದೆ. ವಿವಿಧ ಕಾಲೇಜುಗಳು, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಚ್ಛತಾ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ವಚ್ಛತೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ನಗರಕ್ಕೆ ಪ್ರಶಸ್ತಿ ದೊರೆಯಲಿದ್ದು, ಈ ಬಾರಿ ಪ್ರಶಸ್ತಿ ಪಡೆಯಲು ಮೈಸೂರು ನಗರ ಎಲ್ಲ ರೀತಿಯ ಪರಿಶ್ರಮ ವಹಿಸುತ್ತಿದೆ.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net