ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವು

ಮೊಹಮ್ಮದ್ ಅನೀಶ್ ಅಬೂಬಕ್ಕರ್
ಮೊಹಮ್ಮದ್ ಅನೀಶ್ ಅಬೂಬಕ್ಕರ್
Published on

ಪ್ರಮುಖ ಮುಖ್ಯಾಂಶಗಳು

  • ಸಂಶಯಾಸ್ಪದ ಪ್ರಕರಣ; ನಾಲ್ವರ ವಿಚಾರಣೆ
ಮಂಗಳೂರು: ಜರ್ಮನಿಯಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಮಂಗಳೂರಿನ ಕುಂಜಿತ್‌ಬೈಲ್‌ನ ಮರಕಡದ ವಿದ್ಯಾರ್ಥಿಯೊಬ್ಬರು ಗುರುವಾರ ಲೀಪ್‌ಜಿಗ್ ಎನ್ನುವಲ್ಲಿ ಸಂಶಯಾಸ್ಪದವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೊಹಮ್ಮದ್ ಅನೀಶ್ ಅಬೂಬಕ್ಕರ್ (21) ಮೃತ ವಿದ್ಯಾರ್ಥಿ. ಅನುಮಾನದ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನೀಶ್ ಜರ್ಮನಿಯ ಹಾಲೆಯ ರಹನ್ ಶಿಕ್ಷಣ ಸಂಸ್ಥೆಯಲ್ಲಿ ಮೂರನೇ ಸೆಮಿಸ್ಟರ್ ಬಿಬಿಎ ವಿದ್ಯಾರ್ಥಿಯಾಗಿದ್ದರು. ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ಜರ್ಮನಿಗೆ ತೆರಳಿದ್ದರು. ಅವರ ತಂದೆ ಮರಕಡ ಅಬೂಬಕ್ಕರ್ ಸಿದ್ದಿಕ್ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅನೀಶ್ ಗುರುವಾರ ಬೆಳಿಗ್ಗೆ ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಲೀಪ್‌ಜಿಗ್‌ನಲ್ಲಿರುವ ರೆಡ್ ಬುಲ್ ಅರೆನಾ ನೀರಿನ ಮನೋರಂಜನಾ ಪ್ರದೇಶದ ಬಳಿಯ ನೀರಿನಲ್ಲಿ ಮೃತದೇಹ ಪತ್ತೆಯಾಯಿತು.
ಅನೀಶ್ ಅವರ ಮೃತದೇಹವನ್ನು ಮಂಗಳೂರಿಗೆ ವಾಪಸ್ ಕಳುಹಿಸಲು ಅನುಕೂಲವಾಗುವಂತೆ ಬರ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ವಕೀಲ ಪಿ.ಎ. ಹಮೀದ್ ಪಡುಬಿದ್ರಿ ಅವರು ಸಂಪರ್ಕದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net