ಭಾರತೀಯ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

7
Published on

ಮೈಸೂರು: ಕ್ರೀಡಾ ಭಾರತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಗಣ್ಯರ ಲಗೋರಿ ಆಟದಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಇತರರು ಸಂತಸದಿಂದ ಭಾಗವಹಿಸಿ ಸಂಭ್ರಮಿಸಿದರು.

ನಗರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಲಗೋರಿ ಆಟಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ ಚಾಲನೆ ನೀಡಿದರು. ಗಣ್ಯರು ಚೆಂಡು ಹಿಡಿದು ಆಟಕ್ಕೆ ನಿಲ್ಲುತ್ತಿದ್ದಂತೆಯೇ ಕ್ರೀಡಾ ಪ್ರೇಮಿಗಳು ಶಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದರು. ಈ ವೇಳೆ ಲಗೋರಿಗೆ ಚೆಂಡು ಎಸೆದು ಮಕ್ಕಳಂತೆ ಸಂಭ್ರಮಿಸಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಭಾರತೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಸಮಾಜ, ರಾಜ್ಯ, ರಾಷ್ಟ್ರದ ಏಕತೆಗಾಗಿ ಕ್ರೀಡೆ ಆಡುವುದು ತುಂಬಾ ಮುಖ್ಯ ಎಂದರು.

ಮುಂದಿನ ಪೀಳಿಗೆಗಾಗಿ ಲಗೋರಿ ಕ್ರೀಡೆಯನ್ನು ಈಗಿನ ಪೀಳಿಗೆಯವರು ಪರಿಚಯಿಸುವ ಮೂಲಕ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವ ಅಗತ್ಯ ಇದೆ. ಮೊಬೈಲ್, ಕಂಪ್ಯೂಟರ್‌ಗಳನ್ನು ಬಿಟ್ಟು ದೇಶಿ ಕ್ರೀಡೆ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ 20 ನಿಮಿಷಗಳಾದರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ದೇಹ, ಮನಸ್ಸು ಸಮತೋಲನವಾಗಿ ಇಟ್ಟುಕೊಳ್ಳಲು ಸಹಕಾರಿ ಎಂದು ತಿಳಿಸಿದರು.

ಮಾಜಿ ಶಾಸಕ ಎಲ್.ನಾಗೇಂದ್ರ, ಕ್ರೀಡಾ ಭಾರತಿ ಪ್ರಾಂತ್ಯ ಕಾರ್ಯದರ್ಶಿ ಪ್ರಸಾದ್, ರಾಜ್ಯ ಕ್ರೀಡಾ ಸಮಿತಿ ಸಂಚಾಲಕ ಸಿ.ಕೆ.ರುದ್ರಮೂರ್ತಿ, ಕಾವೇರಿ ಆಸ್ಪತ್ರೆ ಅಧ್ಯಕ್ಷ ಡಾ.ಚಂದ್ರಶೇಖರ್, ಜಿಎಸ್‌ಎಸ್‌ನ ಡಿ.ಶ್ರೀಹರಿ, ಮೈಸೂರು ಸಂಘ, ಸಂಸ್ಥೆಗಳ ಬಿ.ಎಸ್.ಪ್ರಶಾಂತ್, ವಿವಿಧ ಕ್ಷೇತ್ರದ ಪವನ್ ರಂಗ, ಡಾ.ಅಜಯ್ ಹೆಗ್ಡೆ, ಡಾ.ಲಕ್ಷ್ಮೀ ನರಸಿಂಹನ್, ಖಾದರ್, ಚೇತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net