

ಬೆಳಗಾವಿ: ಪೂರ್ವಾಪರ ವಿಚಾರಿಸದೆ ಮನೆಗೆಲಸಕ್ಕೆ ಮಹಿಳೆಯೊಬ್ಬಳನ್ನು ಇಟ್ಟುಕೊಂಡ ತಪ್ಪಿಗಾಗಿ ನನ್ನ ಕುಟುಂಬ ಒಡೆದು ಹೋಗುತ್ತಿತ್ತು. ಆದರೆ, ಬೆಳಗಾವಿ ಪೊಲೀಸರು ನನ್ನ ಕೌಟುಂಬಿಕ ಕಲಹದ ಪ್ರಕರಣವನ್ನು ಬಲು ಚಾಣಾಕ್ಷತೆಯಿಂದ ನಿಭಾಯಿಸಿ ಕುಟುಂಬದಲ್ಲಿ ಸಂತಸ ಮೂಡಿಸಿದ್ದಾರೆ. ಅವರಿಗೆಲ್ಲ ಕೃತಜ್ಞನಾಗಿರುತ್ತೇನೆ ಎಂದು ಗೀತೆ ರಚನೆಕಾರ ಕಲ್ಯಾಣ್ ತಿಳಿಸಿದ್ದಾರೆ.
ನಮ್ಮ ಕೌಟುಂಬಿಕ ವಿಚಾರದಲ್ಲಿ ಆಕಸ್ಮಿಕವಾಗಿ ಬಂದ ಮೂರನೇ ವ್ಯಕ್ತಿಗಳಿಂದ (ಗಂಗಾ ಕುಲಕರ್ಣಿ) ಕುಟುಂಬದಲ್ಲಿ ತೊಂದರೆ ಆಗಿತ್ತು. ಈ ಬಗ್ಗೆ ಬೆಳಗಾವಿ ಪೊಲೀಸರ ಸಹಕಾರ ಕೋರಿದ್ದೆ. ಅವರು ಶ್ರಮವಹಿಸಿ ಅಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ನನ್ನ ಪತ್ನಿ, ಮಾವ ಹಾಗೂ ಅತ್ತೆಯನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂಬ ಭರವಸೆ ಇದೆ. ಆದರೆ, ಮನೆಗೆಲಸಕ್ಕೆ ಯಾರನ್ನೂ ವಿಚಾರಿಸದೆ ತೆಗೆದುಕೊಳ್ಳಬೇಡಿ. ಅವರ ಪೂರ್ವಾಪರ ಅರಿತುಕೊಂಡ ಬಳಿಕವೇ ಮನೆಗೆ ಸೇರಿಸಿಕೊಳ್ಳಿ ಎಂದು ಜನರಲ್ಲಿ ಕಲ್ಯಾಣ್ ಮನವಿ ಮಾಡಿದ್ದಾರೆ.