ಭಾರತೀಯ ಭತ್ತದ ತಳಿಯಲ್ಲಿ ಔಷಧೀಯ ಗುಣ: ಅದಮಾರು ಶ್ರೀ

udp-20-battatali
Published on

ಉಡುಪಿ: ಭಾರತೀಯ ಭತ್ತದ ತಳಿಯಲ್ಲಿ ಔಷಧಿಯ ಗುಣವಿದ್ದು, ಇದನ್ನು ಸಂರಕ್ಷಿಸುವುದು ದೇಶ ಸೇವೆಗೆ ಸಮ. ನಶಿಸುತ್ತಿರುವ ಅಪೂರ್ವ ತಳಿಗಳನ್ನು ಉಳಿಸುವ ಕೃಷಿ ಪರಿವಾರದ ಕಾರ್ಯ ಶ್ಲಾಘನೀಯ ಎಂದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಪೇಜಾವರ ಮಠದಲ್ಲಿ ಕೃಷಿ ಪ್ರಯೋಗ ಪರಿವಾರ ತೀರ್ಥಹಳ್ಳಿ, ಭಾರತೀಯ ಕಿಸಾನ್​ ಸಂಘ, ಕೇದಾರೋತ್ಥಾನ ಟ್ರಸ್ಟ್​ ಸಹಯೋಗದಲ್ಲಿ ರೈತರಿಗೆ ಬೊಗಸೆ ಭತ್ತದ ಬೀಜ ನೀಡುವ ಮೂಲಕ ತಳಿ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿ ಅನುಸರಿಸುತ್ತಿದ್ದರಿಂದ ಆಯಾ ಭಾಗಗಳಲ್ಲಿ ಭತ್ತದ ತಳಿಯ ವೈವಿಧ್ಯತೆ ಹಾಗೂ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗಿತ್ತು. ಆದರೆ, ಇಂದಿನ ಕಾಲದಲ್ಲಿ ಸಮಾಜ ವಿಸ್ತಾರಗೊಂಡ ಪರಿಣಾಮ ಭತ್ತದ ತಳಿಯನ್ನು ಸಂರಕ್ಷಿಸಿಕೊಳ್ಳುವುದು ಕಠಿಣವಾಗಿದೆ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಪ್ರಯೋಗ ಪರಿವಾರದ ವಿಶ್ವಸ್ಥ ಶ್ರೀವತ್ಸ, ಕರಾವಳಿ ಜಿಲ್ಲೆಗಳಲ್ಲಿ ಅನಾದಿ ಕಾಲದಿಂದ ಬಿತ್ತಿ ಬೆಳೆದು ಬಂದಿದ್ದ ಅನೇಕ ಭತ್ತದ ತಳಿಗಳು ಇಂದು ನಾಶವಾಗಿವೆ. ಅವುಗಳ ಸಂರಕ್ಷಣೆಯ ಜೊತೆಗೆ 2028ರಿಂದ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದಲ್ಲಿ ಶ್ರೀ ಕೃಷ್ಣನಿಗೆ ದಿನಕ್ಕೊಂದು ತಳಿ ಅಕ್ಕಿಯ ಅನ್ನವನ್ನು ನೈವೇದ್ಯ ಮಾಡುವ ಸಂಕಲ್ಪ ಕೈಗೊಳ್ಳಲಾಗಿದೆ. ಒಂದು ವರ್ಷಕ್ಕೆ ಸುಮಾರು 340 ತಳಿಯ ಅಕ್ಕಿಯ ಅಗತ್ಯತೆ ಇದೆ. ಕಳೆದ ವರ್ಷ 60 ತಳಿಯ ಬೀಜಗಳನ್ನು ವಿತರಿಸಲಾಗಿದ್ದು, ಈ ಬಾರಿ ಮತ್ತೆ 30 ತಳಿಯ ಬೀಜಗಳನ್ನು ನೀಡಲಾಗುವುದು ಎಂದರು.

ಕೃಷಿ ಇಲಾಖೆ ಉಪನಿರ್ದೇಶಕ ಮೋಹನ್​ ರಾಜ್​, ಬ್ರಹ್ಮಾವರ ಕೃಷಿ ಕೇಂದ್ರದ ಕೃಷಿ ವಿಜ್ಞಾನಿ ಡಾ.ಧನಂಜಯ್​, ಭಾರತೀಯ ಕಿಸಾನ್​ ಸಂಘದ ಉಪಾಧ್ಯಕ್ಷ ಸಾಂತೂರು ಶ್ರೀನಿವಾಸ ಭಟ್​ ಉಪಸ್ಥಿತರಿದ್ದರು. ಭಾಕಿಸಂ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net