

ಬೆಂಗಳೂರು: ಇಂಡಿಯನ್ ಬ್ಯಾಂಕ್ 2019-2020ನೇ ವಿತ್ತೀಯ ವರ್ಷದ 3ನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು, 247 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಾರ್ಯಾಚರಣೆಯ ಲಾಭ ಶೇ.67 ಮತ್ತು ನಿವ್ವಳ ಲಾಭ ಶೇ.62 ಏರಿಕೆಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಪರಿಗಣಿಸಿರುವ 9 ತಿಂಗಳ ಬ್ಯಾಂಕಿನ ವಹಿವಾಟಿನ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಿರುವುದಾಗಿ ಬ್ಯಾಂಕ್ನ ಸಿಇಒ ಪದ್ಮಜಾ ಚುಂಡೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಕಾರ್ಯಾಚರಣೆ ಲಾಭ 3,635 ಕೋಟಿ ರೂ.ನಿಂದ 4,795 ಕೋಟಿ ರೂ.ಗೆಮತ್ತು ನಿವ್ವಳ ಲಾಭ 152 ಕೋಟಿ ರೂ.ಗಳಿಂದ 247 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟಾರೆ ಬ್ಯಾಂಕಿನ ಆದಾಯ 5,269 ಕೋಟಿ ರೂ.ಗಳಿಂದ 6,506 ರೂ.ಗೆ ಏರಿಕೆಯಾಗಿದೆ. ಠೇವಣಿ ಮತ್ತು ಮುಂಗಡ ಹೂಡಿಕೆಯಿಂದ ಹೆಚ್ಚಿನ ಲಾಭ ಬಂದಿದೆ. ರಿಟೇಲ್ ಸಾಲ ವಿತರಣೆ ಶೇ.22, ಕೃಷಿ ಶೇ.13, ಎಂಎಸ್ಎಂಇ ಶೇ.19 ಬೆಳವಣಿಗೆ ಸಾಧಿಸಿದೆ ಎಂದರು.
ನಿವ್ವಳ ಬಡ್ಡಿ ಆದಾಯ ಶೇ.14 ಏರಿಕೆ: ಕಳೆದ ಬಾರಿ ನಿವ್ವಳ ಬಡ್ಡಿ ಆದಾಯ 1,717 ಕೋಟಿ ರೂ. ಇತ್ತು. ಅದೀಗ 1,955 ಕೋಟಿ ರೂ.ಗೆ ಹೆಚ್ಚಾಗಿದೆ. ಇದರಿಂದ ಶೇ.14 ಹೆಚ್ಚಳ ಸಾಧಿಸಿದಂತಾಗಿದೆ. ನಿವ್ವಳ ಅದಾಯ ಶೇ.38, ಇತರೆ ಆದಾಯ ಶೇ.133ಕ್ಕೆ ಏರಿಕೆಯಾಗಿದೆ. ಬ್ಯಾಂಕ್ ಒಟ್ಟು 4,50,278 ಕೋಟಿ ರೂ. ವಹಿವಾಟು ಹೊಂದಿದೆ. ಒಟ್ಟಾರೆ ಠೇವಣಿಯಿಂದ 2,57,621 ಕೋಟಿ ರೂ. ಸಂಗ್ರಹವಾಗಿದೆ. ಬ್ಯಾಂಕ್ ಉತ್ತಮ ಪ್ರಗತಿಯತ್ತ ಮುಖ ಮಾಡಿದೆ ಎಂದು ಪದ್ಮಜಾ ಚುಂಡೂರು ತಿಳಿಸಿದರು.
ಫೈನಾನ್ಷಿಯಲ್ ಎಕ್ಸ್ಪ್ರೆಸ್ ನಡೆಸಿದ ಸಮೀಕ್ಷೆ ಪ್ರಕಾರ ರಾಷ್ಟ್ರೀಯ ಬ್ಯಾಂಕ್ ವರ್ಗದಲ್ಲಿ ನಮ್ಮ ಬ್ಯಾಂಕ್ 2017-18ನೇ ಸಾಲಿನ ಅತ್ಯುತ್ತಮ ಬ್ಯಾಂಕ್ ಎಂಬ ಪ್ರಶಸ್ತಿ ಪಡೆದಿದೆ. ರೀಡರ್ಸ್ ಡೈಜೆಸ್ಟ್ 2019ರಲ್ಲಿ ಬಹು ನಂಬಿಕೆಯ ಬ್ಯಾಂಕ್ ಎಂಬ ಪ್ರಶಸ್ತಿಯನ್ನು ಕೊಟ್ಟಿತ್ತು. ಕೇಂದ್ರ ಸರ್ಕಾರ ಡಿಜಿ ಜನ್ಧನ್ ಪೇಮೆಂಟ್ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳು ಲಭ್ಯವಾಗಿವೆ.
| ಪದ್ಮಜಾ ಚುಂಡೂರು ಇಂಡಿಯನ್ ಬ್ಯಾಂಕ್ ಸಿಇಒ