

ಕಾರವಾರ: ಭಾರತೀಯ ನೌಕಾ ಪಡೆಗೆ ಸೇರ್ಪಡೆಯಾಗಿರುವ ಜಲಾಂತರ್ಗಾಮಿ ನಿರೋಧಕ ಶೆಲ್ಲೋ ವಾಟರ್ ಕ್ರಾಫ್ಟ್ (ಎಸ್‌ಡಬ್ಲುಸಿ) ನೌಕೆಗೆ ಕಾರವಾರದ ಅಂಜುದೀವ್ ಎಂಬ ಐತಿಹಾಸಿಕ ದ್ವೀಪದ ಹೆಸರಿಡಲಾಗಿದೆ.
ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಆ್ಯಂಡ್ ಇಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಿನ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನೌಕೆಯನ್ನು ನಿರ್ಮಾಣ ಮಾಡಲಾಗಿದೆ.ಬುಧವಾರ ಚೆನ್ನೈನ ಕಟ್ಟುಪಲ್ಲಿಯಲ್ಲಿ ನೌಕೆಯನ್ನು ನೀರಿಗಿಳಿಸಿ ಲೋಕಾರ್ಪಣೆ ಮಾಡಲಾಗಿದೆ. 2019 ರಲ್ಲಿ ನೌಕೆ ನಿರ್ಮಾಣ ಸಂಬಂಧ ರಕ್ಷಣಾ ಇಲಾಖೆ ಹಾಗೂ ಕಂಪನಿಯ ಜತೆ ಒಪ್ಪಂದವಾಗಿತ್ತು. ಇದುವರೆಗೆ ಎಸ್‌ಡಬ್ಲುಸಿ ಮಾದರಿಯ ಎರಡು ಹಡಗುಗಳನ್ನು ನೌಕಾಪಡೆಗೆ ಸೇರಿಸಲಾಗಿದ್ದು, ಇದು ಮೂರನೇ ಹಡಗಾಗಿದೆ. 77ಮೀಟರ್ ಇದ್ದವಿರುವ ಈ ಹಡಗು ಅತ್ಯಾಧುನಿಕ ಯುದ್ಧ ತಂತ್ರಜ್ಞಾನ, ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸಬಲ್ಲದು.
ಊರುಗಳ ಹೆಸರು:
ಭಾರತೀಯ ನೌಕಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಐಎನ್‌ಎಸ್ ಕಾರವಾರ, ಐಎನ್‌ಎಸ್ ಮೈಸೂರು ಹೀಗೆ ಕರ್ನಾಟಕದ ಊರುಗಳ ಹೆಸರಿನ ಹಲವು ನೌಕೆಗಳು ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿವೆ.
ಎಲ್ಲಿದೆ ಅಂಜುದೀವ್..?
ಕಾರವಾರ ನಗರದ ಬಿಣಗಾದಿಂದ ಸಮುದ್ರದಲ್ಲಿ ಸುಮಾರು 3 ಕಿಮೀ ದೂರದಲ್ಲಿರುವುದು ಅಂಜುದೀವ್ ಎಂಬ ಪುಟ್ಟ ದ್ವೀಪ. ಕೇವಲ 150 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಕಾರವಾರದ ಕಣ್ಣಳತೆಯಲ್ಲೇ ಇದ್ದರೂ ಈ ದ್ವೀಪವು ತೀರ ಇತ್ತೀಚಿನವರೆಗೆ ಗೋವಾ ರಾಜ್ಯಕ್ಕೆ ಸೇರಿತ್ತು. 2005 ರಿಂದ ಈ ದ್ವೀಪವು ಕದಂಬ ನೌಕಾನೆಲೆಯ ವ್ಯಾಪ್ತಿಗೆ ಸೇರಿತು. ದ್ವೀಪಕ್ಕೆ ನೌಕಾಸೇನೆಯು ದಡದಿಂದ ಅಲೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ವಾಹನ ಓಡಾಟದ ವ್ಯವಸ್ಥೆ ಮಾಡಿದೆ.
ಅಂಜುದೀವ್ ದ್ವೀಪವು ತನ್ನ ಒಡಲಲ್ಲಿ ರೋಚಕವಾದ ಇತಿಹಾಸವನ್ನು ಇಟ್ಟುಕೊಂಡಿದೆ. ಕಾರವಾರವಾದ ಜತೆ ಅಂಜುದೀವ್ ದ್ವೀಪ ಅವಿನಾಭಾವ ಸಂಬಂಧ ಹೊಂದಿತ್ತು. ಕಾರವಾರಕ್ಕೆ ಸಾವಿರದ ನಾನೂರು ವರ್ಷಗಳ ಇತಿಹಾಸವಿರುವ ದಾಖಲೆಗಳು ಸಿಗುತ್ತವೆ ಎನ್ನುತ್ತಾರೆ ಇತಿಹಾಸಕಾರ ಲಕ್ಷ್ಮೀಶ ಸೋಂದಾ.
ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಎಂದು ನಂಬಲಾಗುವ ವಾಸ್ಕೋಡಿಗಾಮ ಇಲ್ಲಿ ಬಂದು ತಂಗಿದ್ದ ಎನ್ನಲಾಗುತ್ತದೆ. 1498 ಕ್ಕೂ ಪೂರ್ವ ಇಲ್ಲಿ ಪೋರ್ಚುಗೀಸರು ನೆಲೆ ಸ್ಥಾಪಿಸಿದರು ಎಂದು ಇತಿಹಾಸ ಹೇಳುತ್ತದೆ. ಹಿಂದು ಹಾಗೂ ಕ್ಯಾಥೋಲಿಕ್ ಧರ್ಮಿಯರ ಆಸ್ತೆಯ ಐತಿಹಾಸಿಕ ಕೇಂದ್ರಕ್ಕೆ ಈಗ ಭಾರತೀಯ ನೌಕಾಸೇನೆ ಗೌರವ ನೀಡಿದೆ.
ಇಲ್ಲಿ ಅಂಜನಾದೇವಿ ಎಂಬ ದೇವಿಯ ಮಂದಿರವಿತ್ತು ಎನ್ನಲಾಗುತ್ತದೆ. ಈ ದ್ವೀಪದಲ್ಲಿ ಲೇಡೀಸ್ ಆಫ್ ಸ್ಪ್ರಿಂಗ್ ಚರ್ಚ್ ಹಾಗೂ ಹಲವು ಸ್ಮಾರಕಗಳು ಈಗಲೂ ಇವೆ. ಈ ಹಿಂದೆ ವರ್ಷಕ್ಕೊಮ್ಮೆ ಪೇಸ್ತು(ಕ್ರಿಶ್ವಿಯನ್ ಧಾರ್ಮಿಕ ಹಬ್ಬ)ಆಗುತ್ತಿತ್ತು. ಅದಕ್ಕೆ ಪ್ರವೇಶ ನೀಡುವಂತೆ ಗೋವಾದ ಕೆಲವು ಕ್ಯಾಥೋಲಿಕ್ ಮುಖಂಡರು ನಿರಂತರವಾಗಿ ಒತ್ತಾಯಿಸುತ್ತ ಬಂದಿದ್ದಾರೆ. ಮಾತ್ರವಲ್ಲ ಆ ಸಂಬಂಧ ಗೋವಾದ ನಾಗರಿಕರೊಬ್ಬರು ಪೋರ್ಚುಗಲ್ ಪ್ರಧಾನಿಗೆ ಪತ್ರ ಬರೆದಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಭದ್ರತೆಯ ದೃಷ್ಟಿಯಿಂದ ಇಲ್ಲಿ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.