ಗಮನ ಸೆಳೆದ ಭಾರತೀಯ ಚಂದ್ರ ಪತಂಗ

Patanga
Published on

ಕುಮಟಾ: ಪಶ್ಚಿಮಘಟ್ಟದ ಸುಂದರ ಚಿಟ್ಟೆ ಪ್ರಭೇದಗಳಲ್ಲಿ ಒಂದಾದ ಭಾರತೀಯ ಚಂದ್ರ ಪತಂಗ(ಇಂಡಿಯನ್ ಮೂನ್ ಮಾಥ್)ವೊಂದು ತಾಲೂಕಿನ ಹೆಗಡೆ ಗ್ರಾಮದಲ್ಲಿ ಕಂಡು ಬಂದಿದೆ.

ಗ್ರಾಮದಲ್ಲಿರುವ ವಕೀಲೆ ಸುಧಾ ಗೌಡ ಅವರ ಹೂದೋಟದಲ್ಲಿ ಈ ಅತ್ಯಾಕರ್ಷಕ ಪತಂಗ ಕಂಡುಬಂದಿದೆ. ಬೊಗಸೆ ಗಾತ್ರದ ಸುಂದರ ಪತಂಗವಾದ್ದರಿಂದ ಕುತೂಹಲದಿಂದ ಸಾರ್ವಜನಿಕರು ಕೂಡಾ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದು ಸಾಮಾನ್ಯವಾಗಿ ಭಾರತದಾದ್ಯಂತ ಕಂಡುಬರುವ ಮೂನ್ ಮಾಥ್(ವೈಜ್ಞಾನಿಕ ಹೆಸರು : ಆಕ್ಟಿಯಾಸ್ ಸೆಲೀನ್)ಆಗಿದೆ. ಪಶ್ಚಿಮಘಟ್ಟದ ದಟ್ಟ ಅರಣ್ಯಗಳು ಮಾತ್ರವಲ್ಲದೆ ಅರಣ್ಯದಂಚಿನ ಬಾಳೆ ತೋಟ, ದಾಸವಾಳದಂತಹ ಹೂಗಿಡಗಳ ಪ್ರದೇಶದಲ್ಲಿ ಕಂಡುಬರುತ್ತವೆ. ಕೋಶದಿಂದ ಪತಂಗವಾಗಿ ಹೊರಬಂದ ಒಂದೆರಡು ವಾರದಲ್ಲಿ ಗಂಡು-ಹೆಣ್ಣು ಪತಂಗಗಳು ಸೇರಿ ಸಂತಾನ ಪ್ರಕ್ರಿಯೆ ಮುಗಿಸಿ ಲಾರ್ವಾಗಳನ್ನು ಸ್ರವಿಸಿ ಸಾಯುತ್ತವೆ.

ಬಾವಲಿಗಳು ಪತಂಗದಂತಹ ಕೀಟಗಳನ್ನು ಪ್ರತಿಧ್ವನಿತ ತರಂಗಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. ಆದರೆ ಚಂದ್ರಪತಂಗಗಳ ಉದ್ದನೆಯ ತಿರುಚಿದಂತೆ ಕಾಣುವ ಬಾಲ(ಸ್ಯಾಟರ್ನೈಡ್)ಗಳ ವಿನ್ಯಾಸ ತಮ್ಮನ್ನು ತಿನ್ನಲು ಬರುವ ಬಾವಲಿಗಳ ಕಣ್ತಪ್ಪಿಸುವ ಉದ್ದೇಶದಿಂದ ನಿಸರ್ಗವೇ ನೀಡಿದ ರಚನೆಯಾಗಿದೆ. ಈ ತಿರುಚಿದ ಬಾಲಗಳು ಪ್ರತಿಧ್ವನಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸಿ, ಬಾವಲಿಗಳನ್ನು ಗೊಂದಲಗೊಳಿಸುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net