

ಉಡುಪಿ: ನ್ಯಾಯಾಲಯಗಳ ತೀರ್ಪು ಪ್ರಸ್ತುತ ಇಂಗ್ಲಿಷ್ನಲ್ಲಿ ಪ್ರಕಟವಾಗುತ್ತಿದೆ. ಭಾರತೀಯ ಭಾಷೆಗಳಲ್ಲಿ ಇದು ಉಪಲಬ್ಧವಾಗಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಕೆಳ ಹಂತದಿಂದ ಸವೋರ್ಚ್ಛನ್ಯಾಯಾಲಯದವರೆಗೆ ವಾರ್ಷಿಕ ಸುಮಾರು 5 ಕೋಟಿ ತೀರ್ಪುಗಳ ಭಾಷಾಂತರ ಕಾರ್ಯಕ್ಕೆ ಹೆಚ್ಚಿನ ಮಾನವ ಸಂಪನ್ಮೂಲದ ಅವಶ್ಯಕತೆ ಒದಗಲಿದೆ. ಸವೋರ್ಚ್ಚ ನ್ಯಾಯಾಲಯದ ತೀರ್ಪನ್ನು 22 ಭಾಷೆಯಲ್ಲಿ ತೀರ್ಪು ಪ್ರಕಟಿಸಬೇಕಿದ್ದು, ದೊಡ್ಡ ಉದ್ಯೋವಕಾಶ ಕಲ್ಪಿಸಲಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ಭಾರತೀಯ ಭಾಷ ಸಮಿತಿ ಅಧ್ಯಕ್ಷ ಚಮು ಕೃಷ್ಣ ಶಾಸ್ತ್ರಿ ಹೇಳಿದರು.
ಬೆಂಗಳೂರಿನ ಭಾರತೀಯ ವಿದ್ಯತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಭಾರತೀಯ ಭಾಷೆಗಳು ಎಂಬ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ದೇಶದಲ್ಲಿ 4 ಲಕ್ಷ ಮಂದಿ ಭಾಷಾಂತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ 10 ವರ್ಷದಲ್ಲಿ 10 ಲಕ್ಷ ಭಾಷಾಂತರಕಾರರ ಅಗತ್ಯವಿದೆ. ಹಸ್ತಪ್ರತಿಗಳ ಸಂಶೋಧನೆ ಮತ್ತು ಪ್ರಕಟಣೆ ವಿಭಾಗದಲ್ಲಿ ಭಾಷಾ ವಿದ್ವಾಂಸರ ಅವಶ್ಯಕತೆ ಇದೆ. ಇದೇ ರೀತಿ ನೀತಿ ಆಯೋಗದ ಅಟಲ್ ಇನೋವೇಶನ್ ಸೆಂಟರ್ನಲ್ಲಿ ಪ್ರತಿ ಸಂಶೋಧನೆಯನ್ನು 22 ಭಾಷೆಗಳಿಗೂ ಅನುವಾದಿಸಲಾಗುತ್ತಿದೆ ಎಂದರು.
ಸಮಕಾಲಿನ ಸಾಹಿತ್ಯ, ಮಾತನಾಡುವ ಜನರು, ಪಠ್ಯಕ್ರಮಕ್ಕೆ ಸೇರ್ಪಡೆ, ತಂತ್ರಜ್ಞಾನಕ್ಕೆ ಹೊಂದಿಕೆ ಇವು ಭಾಷೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಗಳು ಹೆಚ್ಚು ಕೆಲಸ ಮಾಡಬೇಕು. ಭಾಷೆಯನ್ನು ಸಮಾಜದ ವಿಟನೆಗೆ ಬಳಸಿಕೊಳ್ಳದೆ ಜನರನ್ನು ಜೋಡಿಸುವ ಮಾಧ್ಯಮವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ ಎಂದರು.
ಉಜ್ಜಯಿನಿ ಮಹರ್ಷಿ ಪಾಣಿನಿ ಸಂಸತ ವಿವಿ ಉಪಕುಲಪತಿ ಡಾ. ವಿಜಯ್ ಕುಮಾರ್, ನೇಪಾಳದ ವಿದ್ವಾಂಸ ಕಾಶಿನಾಥ್, ಅಹಮದಾಬಾದ್ ಸಂಸತ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ವಸಂತ ಕುಮಾರ್ ಭಟ್, ಇಂಡಿಕಾ ನಿರ್ದೇಶಕ ಪ್ರೊ. ನಾಗರಾಜ ಪಾಟುರಿ, ಕ್ಯಾಲಿಕಟ್ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುಂದರೇಶ್ವರನ್, ಕೇಂದ್ರೀಯ ಸಂಸತ ವಿವಿ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ, ಭಾರತೀಯ ವಿದ್ಯತ್ ಪರಿಷತ್ತು ಅಧ್ಯಕ್ಷ ಡಾ. ವೀರನಾರಾಯಣ ಪಾಂಡುರಂಗಿ ಮೊದಲಾದವರು ಉಪಸ್ಥಿತರಿದ್ದರು.